ಅಧಿಕಾರದಲ್ಲಿರದ ಹತಾಶೆಯಿಂದ ಎಚ್‌ಡಿಕೆ ಅಸಂಬದ್ಧ ಹೇಳಿಕೆ: ಡಿಸಿಎಂ ಅಶ್ವಥ್ ನಾರಾಯಣ್

ಬೆಂಗಳೂರು, ಸೆ. 6: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ತೀವ್ರ ವಾಗ್ದಾಳಿ ನಡೆಸಿದ್ದು, ಅಧಿಕಾರದಲ್ಲಿರದ ಹತಾಶೆಯನ್ನು ಎಚ್‌ಡಿಕೆ ತಮ್ಮ ಅಸಂಬದ್ಧ ಹೇಳಿಕೆಗಳ ಮೂಲಕ ಹೊರ ಹಾಕುತ್ತಿದ್ದಾರೆಂದು ಟೀಕಿಸಿದ್ದಾರೆ.
‘ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಅವರ ಅಜ್ಞಾನವನ್ನು ಪ್ರದರ್ಶಿಸಿದೆ. ಯಾವುದೇ ಆರೋಪ ಮಾಡುವಾಗ ಒಬ್ಬ ಮಾಜಿ ಸಿಎಂ ವಾಸ್ತವ ತಿಳಿದುಕೊಳ್ಳದೆ ಹತಾಶರಾಗಿ, ಏನೇನೊ ಹೇಳಿ ಅಪಹಾಸ್ಯಕ್ಕೆ ಒಳಗಾಗಿದ್ದಾರೆ. ಅಧಿಕಾರದಲ್ಲಿರದ ಹತಾಶೆಯನ್ನು ಅಸಂಬದ್ಧ ಹೇಳಿಕೆಯ ಮೂಲಕ ಹೊರಹಾಕುವುದು ನಿಮ್ಮ ಹಳೆಯ ಚಾಳಿಯಾಗಿದೆ’ ಎಂದು ಅಶ್ವಥ್ ನಾರಾಯಣ ಟ್ವಿಟ್ಟರ್ ಮೂಲಕ ಲೇವಡಿ ಮಾಡಿದ್ದಾರೆ.
ಡಿ.ಕೆ.ಶಿವಕುಮಾರ್ ಬಂಧನಕ್ಕೆ ಬಿಜೆಪಿಯೇ ಕಾರಣ. ಬಿಜೆಪಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, ಪ್ರಜಾಪ್ರಭುತ್ವತ ಕಗ್ಗೊಲೆ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಿಸಿದ್ದರು. ಅಲ್ಲದೆ, ಬಿಬಿಎಂಪಿ ಕಚೇರಿಯಲ್ಲಿನ ಕಡತಗಳ ಬೆಂಕಿ ಪ್ರಕರಣ ಸಂಬಂಧ ಅಶ್ವಥ್ ನಾರಾಯಣ ಹೆಸರು ಉಲ್ಲೇಖಿಸಿದ್ದರು.