ಸಂಸದ ಪ್ರಜ್ವಲ್ ರೇವಣ್ಣ ಅನರ್ಹಗೊಳಿಸಲು ಕೋರಿ ಅರ್ಜಿ: ಸಮನ್ಸ್ ಬಗ್ಗೆ ಪತ್ರಿಕೆಯಲ್ಲಿ ಪ್ರಕಟಿಸಲು ಹೈಕೋರ್ಟ್ ಅನುಮತಿ

ಬೆಂಗಳೂರು, ಸೆ.6: ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ ಆರೋಪ ಸಂಬಂಧ ಪ್ರಜ್ವಲ್ ರೇವಣ್ಣ ಅವರನ್ನು ಅನರ್ಹಗೊಳಿಸಲು ಕೋರಿರುವ ಅರ್ಜಿ ಕುರಿತ ಸಮನ್ಸ್ ತಲುಪದ ಹಿನ್ನೆಲೆಯಲ್ಲಿ ಪ್ರತಿಯನ್ನು ಹಾಸನ ಜಿಲ್ಲೆಯ ಸ್ಥಳೀಯ ಪತ್ರಿಕೆ, ರಾಜ್ಯ ಮಟ್ಟದ ಪತ್ರಿಕೆಯಲ್ಲಿ ಪ್ರಕಟಿಸಲು ಅನುಮತಿ ನೀಡಿ ಹೈಕೋರ್ಟ್ ಆದೇಶಿಸಿದೆ.
ಪರಾಜಿತ ಬಿಜೆಪಿ ಅಭ್ಯರ್ಥಿ ಎ.ಮಂಜು ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು. ನ್ಯಾಯಪೀಠವು ಸೆ.30ರೊಳಗೆ ಪತ್ರಿಕೆ ಪ್ರಕಟಣೆ ಮೂಲಕ ಪ್ರಜ್ವಲ್ ರೇವಣ್ಣ ಅವರು ಕೋರ್ಟ್‌ಗೆ ಹಾಜರಾಗಬೇಕು. ಹಾಗೂ ನೋಟಿಸ್ ಪಬ್ಲಿಕೇಶನ್ ಪತ್ರಿಕೆಯನ್ನು ಹಾಜರುಪಡಿಸಬೇಕೆಂದು ಸೂಚಿಸಿತು.
ಅರ್ಜಿದಾರರ ಪರ ವಾದಿಸಿದ ವಕೀಲರು, ಹಾಸನ ಜಿಲ್ಲಾ ಕೋರ್ಟ್‌ನ ಸಿಬ್ಬಂದಿಯು ಸಮನ್ಸ್ ಪ್ರತಿ ತಲುಪಿಸಲು ನಾಮಪತ್ರದಲ್ಲಿ ಉಲ್ಲೇಖಿಸಿದ್ದ ವಿಳಾಸಕ್ಕೆ ಹೋಗಿದ್ದರು. ಆ ವಿಳಾಸದಲ್ಲಿ ಪ್ರಜ್ವಲ್ ರೇವಣ್ಣ ಇರಲಿಲ್ಲ. ಹೀಗಾಗಿ, ನ್ಯಾಯಪೀಠ ಸಮನ್ಸ್ ಜಾರಿ ಆಗಿರುವ ಕುರಿತು ಪತ್ರಿಕೆಯಲ್ಲಿ ಪ್ರಕಟಣೆ ನೀಡುವ ಬಗ್ಗೆ ಅನುಮತಿ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು.
ವಕೀಲರ ವಾದ ಆಲಿಸಿದ ನ್ಯಾಯಪೀಠವು ಸಮನ್ಸ್ ತಲುಪದ ಹಿನ್ನೆಲೆಯಲ್ಲಿ ಪ್ರತಿಯನ್ನು ಪತ್ರಿಕೆಗಳಲ್ಲಿ ಪ್ರಕಟಿಸಲು ಅನುಮತಿ ನೀಡಿ ಆದೇಶಿಸಿತು.