ಮಂಗಳೂರು ಕಮಿಷನರ್ ಗೆ ಬರೆದ ಪತ್ರದಲ್ಲಿ ಮಾದಕ ವ್ಯಸನ ತ್ಯಜಿಸಿದ ಯುವಕ ಹೇಳಿದ್ದೇನು?

ಮಂಗಳೂರು, ಸೆ.6: ನಗರದಲ್ಲಿ ಮಾದಕ ವ್ಯಸನ ಮಾಡಿ ಪೊಲೀಸರ ವಶಕ್ಕೆ ಸಿಕ್ಕಿದ ಯುವಕನೊಬ್ಬ ತಾನು ಮಾದಕ ವ್ಯಸನ ತ್ಯಜಿಸಿ ಜೀವನದಲ್ಲಿ ಬದಲಾವಣೆಯ ನಿರ್ಧಾರ ತಳೆದ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ.ಹರ್ಷ ಅವರಿಗೆ ಪತ್ರ ಬರೆದು, ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸಿದ್ದಾನೆ.
ಪತ್ರದಲ್ಲಿ ನಾನು ಐದು ವರ್ಷದಿಂದ ಮಾದಕ ವ್ಯಸನಿಯಾಗಿದ್ದು, ಇದರಿಂದ ನನ್ನ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿತ್ತು. ಇದರಿಂದ ನನ್ನ ಭವಿಷ್ಯವೇ ಆತಂಕದ ಸ್ಥಿತಿಗೆ ತಲುಪಿತ್ತು. ಮಾದಕ ಮುಕ್ತಗೊಳ್ಳಲು ನಾನಾ ರೀತಿ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ ಎಂದು ಪತ್ರದಲ್ಲಿ ಯುವಕ ತಿಳಿಸಿದ್ದಾನೆ.
ಸೆ.2ರಂದು ಮಾದಕ ಸೇವನೆ ಮಾಡಿದಾಗ ಕಾವೂರು ಪೊಲೀಸರು ನನ್ನನ್ನು ವಶಕ್ಕೆ ಪಡೆದಿದ್ದರು. ಬಳಿಕ ಠಾಣೆಯಲ್ಲಿ ಮಂಗಳೂರು ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀನಿವಾಸ್ ಸಾರ್ ಮತ್ತು ಕಾವೂರು ಇನ್‌ಸ್ಪೆಕ್ಟರ್ ರಾಘವ್ ಅವರು ಮಾದಕ ದುಷ್ಪರಿಣಾಮಗಳು, ನನ್ನ ಜೀವನದ ಮಹತ್ವಗಳನ್ನು ಎಳೆಎಳೆಯಾಗಿ ಬಿಡಿಸಿ ಹೇಳಿದರು. ಒಳ್ಳೆಯ ಜೀವನವನ್ನು ನಡೆಸುವ ವಿಧಾನ ತಿಳಿಸುವ ಮೂಲಕ ಅವರಿಬ್ಬರೂ ನನ್ನನ್ನು ಒಳ್ಳೆಯ ಮಾರ್ಗದಲ್ಲಿ ಮುನ್ನಡೆಸಿದರು. ಈ ಸಲಹೆಗಳು ನನ್ನ ಜೀವನವನ್ನೇ ಬದಲಿಸಿದ್ದು, ನಾನು ಮಾದಕ ಮುಕ್ತಗೊಂಡಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾನೆ.
ಪೊಲೀಸ್ ಅಧಿಕಾರಿಗಳು ಮಾದಕಕ್ಕೆ ಮತ್ತೆ ಬಲಿಯಾಗದಂತೆ ಏನೆಲ್ಲ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕೆಂಬ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಇದು ನಿಜಕ್ಕೂ ನನಗೆ ಸಹಕಾರಿಯಾಗಿದೆ. ಈ ಪಾಠ ನಿಜಕ್ಕೂ ನನ್ನ ಜೀವನಕ್ಕೆ ಮಾದರಿಯಾಗಿದೆ. ಮತ್ತೊಮ್ಮೆ ನಾನು ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾನೆ.
ಕಮಿಷನರ್ ಶ್ಲಾಘನೆ
ಯುವಕ ಬರೆದ ಪತ್ರಕ್ಕೆ ಕಮಿಷನರ್ ಡಾ.ಹರ್ಷ ಶ್ಲಾಘನೆ ವ್ಯಕ್ತಪಡಿಸಿದ್ದು, ಯುವಕನ ನಿರ್ಧಾರ ನಿಜಕ್ಕೂ ಅಭಿನಂದನಾರ್ಹ. ದೇಶದ ಆಸ್ತಿಯಾಗಿರುವ ಯುವ ಸಮಾಜ ಮಾದಕದ ಬಗ್ಗೆ ಗಂಭೀರವಾಗಿ ಪರಿಗಣಿಸಿ ಅದರಿಂದ ಮುಕ್ತವಾಗಬೇಕು ಎಂದು ಹೇಳಿದ್ದಾರೆ. ಇದು ಮಾತ್ರವಲ್ಲದೆ ಯುವಕನ ಪತ್ರವನ್ನು ಟ್ವೀಟ್ ಮಾಡಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.







