ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್‌ನಿಂದ ಭಾರೀ ನಿರೀಕ್ಷೆ: ರಿಜಿಜು
ಹೊಸದಿಲ್ಲಿ, ಸೆ.6: ಇತ್ತೀಚೆಗೆ ಬ್ರೆಝಿಲ್‌ನ ರಿಯೋ ಡಿಜನೈರೊದಲ್ಲಿ ನಡೆದ ಶೂಟಿಂಗ್ ವಿಶ್ವಕಪ್‌ನಲ್ಲಿ ಅಭೂತಪೂರ್ವ ಪ್ರದರ್ಶನ ನೀಡಿದ್ದ ಭಾರತೀಯ ಶೂಟರ್‌ಗಳನ್ನು ಶ್ಲಾಘಿಸಿದ ಕ್ರೀಡಾ ಸಚಿವ ಕಿರಣ್ ರಿಜಿಜು, ಮುಂದಿನ ವರ್ಷ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ ಗೇಮ್ಸ್ ನಲ್ಲಿ ಶೂಟರ್‌ಗಳು ಉತ್ತಮ ಪ್ರದರ್ಶನ ಮುಂದುವರಿಸುವ ವಿಶ್ವಾಸ ವ್ಯಕ್ತಪಡಿಸಿದರು.
ರಿಯೋ ಡಿಜನೈರೊದಲ್ಲಿ ನಡೆದ ವಿಶ್ವಕಪ್‌ನಲ್ಲಿ ಐದು ಚಿನ್ನ ಸಹಿತ ಒಟ್ಟು 9 ಪದಕಗಳನ್ನು ಜಯಿಸಿದ್ದ ಭಾರತದ ಶೂಟಿಂಗ್ ತಂಡ ಗುರುವಾರ ಸ್ವದೇಶಕ್ಕೆ ವಾಪಸಾಗಿದೆ. ‘‘ಹಲವು ಪದಕಗಳನ್ನು ಜಯಿಸಿರುವ ನಮ್ಮ ಶೂಟಿಂಗ್ ತಂಡದ ಸಾಧನೆ ಶ್ಲಾಘನೀಯ. ಅಪೂರ್ವ ಪ್ರದರ್ಶನ ನೀಡಿರುವ ತಂಡದ ಸರ್ವ ಸದಸ್ಯರಿಗೆ ನಾನು ಅಭಿನಂದನೆ ಸಲ್ಲಿಸುವೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್ ಕ್ರೀಡೆಯಲ್ಲಿ ನಮ್ಮ ದೇಶದ ಪರ ಗರಿಷ್ಠ ಸಂಖ್ಯೆಯ ಅಥ್ಲೀಟ್‌ಗಳು ಸ್ಪರ್ಧಿಸಲು ಸಜ್ಜಾಗಿದ್ದಾರೆ. ನಾವು ಈಗಾಗಲೇ 9 ಸ್ಥಾನ ಗಿಟ್ಟಿಸಿಕೊಂಡಿದ್ದು, 12 ಕೋಟಾ ಸ್ಥಾನಗಳು ಲಭಿಸುವ ಸಾಧ್ಯತೆಯಿದೆ’’ ಎಂದು ರಿಜಿಜು ಹೇಳಿದ್ದಾರೆ.





