ಬ್ರೆಝಿಲ್ ಲೆಜೆಂಡ್ ಕಾಫುವಿಗೆ ಪುತ್ರ ವಿಯೋಗ
ಲಂಡನ್, ಸೆ.6: ಬ್ರೆಝಿಲ್‌ನ ಮಾಜಿ ಫುಟ್ಬಾಲ್ ನಾಯಕ ಕಾಫು ಅವರ ಪುತ್ರ ತನ್ನ 30ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ತವರು ಪಟ್ಟಣ ಸಾವೊಪೌಲೊದಲ್ಲಿ ತನ್ನ ಸ್ನೇಹಿತರೊಂದಿಗೆ ಫುಟ್ಬಾಲ್ ಆಡುತ್ತಿದ್ದಾಗ ಕಾಫು ಅವರ ಹಿರಿಯ ಪುತ್ರ, 30ರ ಹರೆಯದ ಡ್ಯಾನಿಲೊ ಫೆಲಿಸಿಯಾನೊ ಡಿ ಮೊರೆಸ್ ಅಸ್ವಸ್ಥರಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು ಎಂದು ಸಿಎನ್‌ಎನ್ ವರದಿ ಮಾಡಿದೆ.
ರಿಯಲ್ ಮ್ಯಾಡ್ರಿಡ್, ಇಂಟರ್ ಮಿಲನ್ ಹಾಗೂ ಎಎಸ್ ರೋಮಾ ಸಹಿತ ವಿಶ್ವದ ಎಲ್ಲ ಫುಟ್ಬಾಲ್ ತಂಡಗಳು ಕಾಫು ಅವರ ಪುತ್ರನ ಅಕಾಲಿಕ ಮರಣಕ್ಕೆ ಶೋಕ ವ್ಯಕ್ತಪಡಿಸಿವೆ.
ಐದು ವಿವಿಧ ಫುಟ್ಬಾಲ್ ಕ್ಲಬ್‌ಗಳಲ್ಲಿ ಆಡಿದ್ದ ಕಾಫು 20 ಟ್ರೋಫಿಗಳನ್ನು ಜಯಿಸಿದ್ದಾರೆ. ಕಾಫು ನಾಯಕತ್ವದಲ್ಲಿ ಬ್ರೆಝಿಲ್ ತಂಡ 1994 ಹಾಗೂ 2002ರಲ್ಲಿ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿತ್ತು. ಕಾಫು ಬ್ರೆಝಿಲ್ ಪರ 142 ಪಂದ್ಯಗಳಲ್ಲಿ ಆಡಿದ್ದು, ಬ್ರೆಝಿಲ್ ಪರ ಗರಿಷ್ಠ ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿದ ಹೆಗ್ಗಳಿಕೆ ಗಳಿಸಿದ್ದಾರೆ. ಪ್ರಸ್ತುತ ಅವರು ಖತರ್‌ನಲ್ಲಿ ನಡೆಯಲಿರುವ 2022ರ ವಿಶ್ವಕಪ್‌ನ ಸದ್ಬಾವನಾ ರಾಯಭಾರಿಯಾಗಿ ಫಿಫಾದೊಂದಿಗೆ ಕೆಲಸ ಮಾಡುತ್ತಿದ್ದಾರೆ.







