ಉಡುಪಿ: ಅಡಿಕೆ ಕೊಳೆ ರೋಗ ನಿರ್ವಹಣೆಗೆ ಸೂಚನೆ
ಉಡುಪಿ, ಸೆ. 7: ಕಳೆದ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಸುರಿದ ಗಾಳಿ ಮಳೆಯಿಂದಾಗಿ ಅಡಿಕೆ ತೋಟದಲ್ಲಿ ಅಡಿಕೆ ಉದುರಿ ಬಿದ್ದಿದ್ದು, ಇದರಿಂದ ಅಡಿಕೆ ಕೊಳೆರೋಗ ಹರಡುವ ಶೀಲಿಂದ್ರ ಉಲ್ಬಣಗೊಳ್ಳುವ ಸಾಧ್ಯತೆ ಇದೆ. ತೋಟದಲ್ಲಿ ಕೊಳೆ ರೋಗ ಹರಡದಂತೆ ಹಾಗೂ ರೋಗ ಉಲ್ಬಣವಾಗದಂತೆ ಈ ಕೆಳಗಿನ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ.
ಕೆಳಗೆ ಬಿದ್ದಿರುವ ರೋಗಪೀಡಿತ ಕಾಯಿ ಹಾಗೂ ಒಣಗಿದ ಸಿಂಗಾರಗಳನ್ನು ಆರಿಸಿ ತೆಗೆದು ಸುಡಬೇಕು ಅಥವಾ ಗುಂಡಿಗಳಲ್ಲಿ ಹಾಕಿ ಮಣ್ಣಿನಿಂದ ಮುಚ್ಚಬೇಕು. ತೋಟಗಳಲ್ಲಿ ಜಾಸ್ತಿ ನೀರು ನಿಲ್ಲದಂತೆ ಬಸಿಗಾಲುವೆ ತೆಗೆದು ನೀರು ಹರಿದು ಹೋಗಲು ವ್ಯವಸ್ಥೆ ಮಾಡಬೇಕು.
ಗಾಳಿಯಾಡುವಂತೆ ಮಾಡಲು ಅಂತರ ಬೆಳೆಗಳ ಅಥವಾ ಕಾಡು ಮರಗಳ ಹೆಚ್ಚುವರಿ ರೆಂಬೆಗಳನ್ನು ಕತ್ತರಿಸಿ ತೆಗೆಯಬೇಕು. ಮುಂಜಾಗೃತ ಕ್ರಮವಾಗಿ 2ನೇ ಸಿಂಪರಣೆಯನ್ನು (ಮೊದಲನೆ ಸಿಂಪರಣೆ ಮಾಡಿ 30 ದಿನಗಳ ನಂತರ) ಅಡಿಕೆ ಗೊನೆಯಲ್ಲಿ ಅಡಿಕೆ ಗೊನೆಗಳಿಗೆ, ಎಲೆತೊಟ್ಟು, ಹೊಡೆ ಭಾಗ ಮತ್ತು ಸುಳಿ ಭಾಗಗಳು ಚೆನ್ನಾಗಿ ನೆನೆಯುವಂತೆ ಶೇ.1ರ ಬೋರ್ಡೋ ದ್ರಾವಣವನ್ನು ಅಥವಾ ಶೇ.0.2ರ ಮೆಟಕಾಕ್ಸಿಲ್ ಎಂ.ಜಡ್ (2 ಗ್ರಾಂ 1 ಲೀ ನೀರಿನಲ್ಲಿ ಕರಗಿಸಿ) ಅಥವಾ ಶೇ.0.3 ರ ತಾಮ್ರದ ಆಕ್ಸಿಕ್ಲೋರೈಡ್ (3 ಗ್ರಾಂ 1 ಲೀ. ನೀರಿನಲ್ಲಿ ಕರಗಿಸಿ) ಸೂಕ್ತ ಅಂಟಿನೊಂದಿಗೆ (ರಾಳ) ಬೆರೆಸಿ ಸಿಂಪರಣೆ ಮಾಡಿದರೆ ಮುಂದೆ ಬರುವ ಕೊಳೆ ರೋಗವನ್ನು ಸಾಕಷ್ಟು ಪ್ರಮಾಣದಲ್ಲಿ ತಡೆಗಟ್ಟಬಹುದು. ಮಳೆ ಮುಂದುವರಿ ದರೆ 3ನೇ ಸಿಂಪರಣೆ ಅಗತ್ಯ.
ಶಿಲೀಂದ್ರನಾಶಕ ಸಿಂಪರಣೆ ಮಾಡುವಾಗ ಬೇರುಗಳ ಬುಡದಲ್ಲಿ ಪ್ರತಿ ಮರಕ್ಕೆ 1.5 -2 ಲೀ.ನಂತೆ ಶೇ.1ರ ಬೋರ್ಡೋ ದ್ರಾವಣವನ್ನು ಮರದ ಬುಡದ ಸುತ್ತ ಸಿಂಪಡಿಸಬೇಕು. ಇದರಿಂದ ಬುಡದಲ್ಲಿರುವ ಶಿಲೀಂದ್ರವನ್ನು ಹಾಗೂ ಶಿಲೀಂದ್ರದ ಬೆಳವಣಿಗೆಯನ್ನು ನಿಯಂತ್ರಿಸಬಹುದು.
ಅಡಿಕೆಯಲ್ಲಿ ಅಂತರಬೆಳೆಯಾಗಿ ಕಾಳುಮೆಣಸು ಇದ್ದಲ್ಲಿ ಕಾಳುಮೆಣಸು ಕೊಳೆರೋಗದ ನಿಯಂತ್ರಣಕ್ಕೆ ಬಳ್ಳಿಗಳ ಎಲ್ಲಾ ಎಲೆಗಳಿಗೂ ತಾಗುವಂತೆ ಶೇ.1ರ ಬೋರ್ಡೋ ಸಿಂಪರಣೆ ಮಾಡಬೇಕು ಮತ್ತು ಪ್ರತಿ ಕಾಳುಮೆಣಸಿನ ಬುಡಕ್ಕೆ 2 ಲೀನಷ್ಟು ಬೋರ್ಡೋ ದ್ರಾವಣವನ್ನು ಸುರಿಯಬೇಕು. ಶೇ.1ರ ಬೋರ್ಡೋ ದ್ರಾವಣ ಕೊಳೆರೋಗದ ಹತೋಟಿಯಲ್ಲಿ ಉತ್ತಮವಾದ ಶಿಲೀಂದ್ರನಾಶಕವಾಗಿದ್ದು, ರೈತರು ವೈಜ್ಞಾನಿಕವಾಗಿ ತಯಾರಿಸಿ ಸಿಂಪಡಿಸಿದರೆ ಕೊಳೆರೋಗವನ್ನು ಪರಿಣಾಮಕಾರಿಯಾಗಿ ಹತೋಟಿಗೆ ತರಬಹುದು ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







