ಅಪೌಷ್ಠಿಕತೆ ತಡೆಗಟ್ಟಲು ಪೋಷಣ್ ಅಭಿಯಾನ: ಸಚಿವೆ ಶಶಿಕಲಾ ಜೊಲ್ಲೆ
ಬೆಂಗಳೂರು, ಸೆ. 7: ಅಪೌಷ್ಠಿಕತೆಯನ್ನು ತಡೆಗಟ್ಟಲು ಸಪ್ಟೆಂಬರ್ ತಿಂಗಳನ್ನು ಪೋಷಣ್ ಅಭಿಯಾನ ತಿಂಗಳನ್ನಾಗಿ ಆಚರಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಇಂದಿಲ್ಲಿ ತಿಳಿಸಿದ್ದಾರೆ.
ಅವರು ಇತ್ತೀಚೆಗೆ ಬೆಂಗಳೂರು ಕೇಂದ್ರ ಯೋಜನೆಯ ಶಿಶು ಅಭಿವೃದ್ದಿ ಯೋಜನಾ ವ್ಯಾಪ್ತಿಗೆ ಒಳಪಡುವ ಸಂಪಂಗಿರಾಮನಗರ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ಪೋಷಣ ಅಭಿಯಾನ-ಅಪೌಷ್ಠಿಕತೆ ಮುಕ್ತ ಕರ್ನಾಟಕ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರನ್ನು ಹಾಕುವುದರ ಮುಖಾಂತರ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಈ ಕಾರ್ಯಕ್ರಮದ ಅಂಗವಾಗಿ ಆರ್ಥಿಕವಾಗಿ ಹಿಂದುಳಿದಿರುವ ತುಂಬು ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ, ಹಸುಗೂಸುಗಳಿಗೆ ಅನ್ನಪ್ರಾಶನ, ಹಾಗೂ ಪೌಷ್ಠಿಕ ಆಹಾರಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಇದೇ ವೇಳೆ ತುಂಬು ಗರ್ಭಿಣಿಯರಿಗೆ ಅರಿಶಿಣ-ಕುಂಕುಮ ಹಣ್ಣುಗಳ ಜೊತೆ ಮಡಿಲು ತುಂಬುವ ಸೀಮಂತ ಶಾಸ್ತ್ರವನ್ನು ನೆರವೇರಿಸಿದರು. 6 ತಿಂಗಳು ತುಂಬಿದ ಹಸುಗೂಸುಗಳಿಗೆ ಅನ್ನದ ಪಾಯಸವನ್ನು ಮಕ್ಕಳಿಗೆ ಉಣಬಡಿಸಿದರು. ಗರ್ಭಿಣಿ ಬಾಣಂತಿಯರ ರಕ್ತಹೀನತೆಯನ್ನು ತಡೆಗಟ್ಟಲು ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ಕಡಿಮೆಗೊಳಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ವತಿಯಿಂದ ಮಾತೃಪೂರ್ಣ ಯೋಜನೆಯಡಿಯಲ್ಲಿ ನೀಡುವ ಸಂಪೂರ್ಣ ಊಟ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಸರಬರಾಜಾಗುವ ಆಹಾರ ಪದಾರ್ಥಗಳು ಆಕರ್ಷಕವಾಗಿದ್ದು ಸಮುದಾಯಕ್ಕೆ ಮಕ್ಕಳ ತಾಯಂದಿರಿಗೆ ಪೌಷ್ಠಿಕತೆಯ ಅರಿವನ್ನು ಪ್ರಾತಕ್ಷತೆಯ ಮುಖಾಂತರ ಅರಿವು ಮೂಡಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ನಿರ್ದೇಶಕಿ ಅರುಂದತಿ ಚಂದ್ರಶೇಖರ್, ಜಂಟಿ ನಿರ್ದೇಶಕಿ ಸುರೇಖ ಹಾಗೂ ಬೆಂಗಳೂರು ನಗರ ಜಿಲ್ಲೆಯ ಉಪನಿರ್ದೇಶಕ ನಾರಾಯಣಸ್ವಾಮಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.