ತೊಗರಿಬೇಳೆ ರದ್ದತಿ ಹಿಂಪಡೆಯಲು ಶಾಸಕ ಯು.ಟಿ.ಖಾದರ್ ಒತ್ತಾಯ

ಮಂಗಳೂರು, ಸೆ. 7: ಜನಸಾಮಾನ್ಯರಿಗೆ ಪಡಿತರ ವ್ಯವಸ್ಥೆಯಡಿ ನೀಡಲಾಗುತ್ತಿದ್ದ ತೊಗರಿ ಬೇಳೆಯನ್ನು ರದ್ದುಗೊಳಿಸಿರುವ ಸರಕಾರದ ಕ್ರಮ ಜನವಿರೋಧಿ. ಕೂಡಲೆ ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಶಾಸಕ ಹಾಗೂ ಮಾಜಿ ಚಿವ ಯು.ಟಿ.ಖಾದರ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರವಿದ್ದಾಗ ಬಡವರ ಕಾರ್ಬೊಹೈಡ್ರೇಟ್ಸ್ ಕೊರತೆ ನೀಗಿಸಲು ಅನ್ನಭಾಗ್ಯ ಆರಂಭಿಸಿತ್ತು. ನಂತರ ಸಮತೋಲಿತ ಆಹಾರ ನೀಡಬೇಕು ಎನ್ನುವ ಉದ್ದೇಶದಿಂದ ತೊಗರಿಬೇಳೆ ನೀಡುವ ಕಾರ್ಯಕ್ರಮ ಆರಂಭವಾಗಿತ್ತು. ಇದನ್ನು ರದ್ದುಪಡಿಸುವ ಸರಕಾರದ ಕ್ರಮ ಸರಿಯಲ್ಲ. ಬಡವರ ಮಕ್ಕಳಿಗೆ ಪ್ರೊಟೀನ್‌ಯುಕ್ತ ಆಹಾರ ಬೇಡವೇ ಎಂದವರು ಪ್ರಶ್ನಿಸಿದರು.
ಜನಸಾಮಾನ್ಯರಿಗೆ ನೀಡಲಾಗುತ್ತಿದ್ದ ತೊಗರಿಬೇಳೆಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದ್ದಲ್ಲದೆ, ಬಡವರ ಪರವಾಗಿದ್ದ ಇನ್ನಷ್ಟು ಕಾರ್ಯಕ್ರಮಗಳನ್ನು ಕಡಿತಗೊಳಿಸಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕರುಣೆ ಇಲ್ಲದ ಸರ್ಕಾರ ಎಂದು ಹೇಳಿದರು.
ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ಬಂದ್ ಮಾಡ್ತೇವೆ, ಪಡಿತರ ಅಕ್ಕಿ ಕಡಿಮೆ ಮಾಡ್ತೇವೆ, ರೇಶನ್ ಕಾರ್ಡ್ ದುರ್ಬಳಕೆ ಇತ್ಯಾದಿಯನ್ನೇ ಮಾತನಾಡುತ್ತಿದೆಯೇ ಹೊರತು ಜನರಿಗೆ ಏನು ಹೆಚ್ಚು ಸೌಲಭ್ಯ ನೀಡುತ್ತೇವೆ ಎನ್ನುವ ಆಲೋಚನೆಯನ್ನೇ ಮಾಡುತ್ತಿಲ್ಲ ಎಂದು ಅವರು ಹೇಳಿದರು.
ತೊಗರಿಬೇಳೆ ರದ್ದು ಮಾಡಿದ್ದಕ್ಕೆ ಹಣದ ಕೊರತೆಯ ಕಾರಣವನ್ನು ರಾಜ್ಯ ಸರ್ಕಾರ ನೀಡಿದೆ. ಆದರೆ ಇದಕ್ಕೆ ವಾರ್ಷಿಕವಾಗಿ ಕೇವಲ 200-250 ಕೋಟಿ ರು. ಮಾತ್ರ ಖರ್ಚಾಗುವುದು. ಅದನ್ನೂ ನೀಡಲಾಗದ ಸ್ಥಿತಿಯಲ್ಲಿ ರಾಜ್ಯ ಸರ್ಕಾರ ಇದೆಯೇ? ಜನರಿಗೆ ಊಟ ನೀಡಲು ಸರ್ಕಾರಕ್ಕೆ ಅಷ್ಟೂ ಕಷ್ಟ ಆಗಿದೆಯೇ? ಇದನ್ನು ಮರು ಪರಿಶೀಲಿಸಿ ರದ್ದು ವಾಪಸ್ ತೆಗೆದುಕೊಳ್ಳದಿದ್ದರೆ ಕಾಂಗ್ರೆಸ್ ವತಿಯಿಂದ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಯು.ಟಿ. ಖಾದರ್ ಎಚ್ಚರಿಸಿದರು.
ಇದೀಗ ಪಡಿತರ ಕಾರ್ಡ್ ಕುರಿತಾಗಿ ರಾಜ್ಯ ಸರ್ಕಾರ ಗೊಂದಲ ಸೃಷ್ಟಿ ಮಾಡಿದೆ. ಈಗಾಗಲೇ ಪ್ರವಾಹದಿಂದ ಬಹುತೇಕರ ಪಡಿತರ ಚೀಟಿ ನೀರುಪಾಲಾಗಿದೆ. ಜನರಿಗೆ ಸೌಲಭ್ಯ ನೀಡುವುದು ಬಿಟ್ಟು ಸೌಲಭ್ಯ ಕಸಿಯಲು ಹೊರಟದ್ದು ಸರಿಯಲ್ಲ. ರೇಶನ್ ಕಾರ್ಡ್ ಕಳೆದುಕೊಂಡ ಪ್ರವಾಹ ಪೀಡಿತರಿಗೆ ಕೂಡಲೆ ಆದ್ಯತೆ ಮೇರೆಗೆ ಕಾರ್ಡ್ ವಿತರಿಸುವ ಕಾರ್ಯ ಮಾಡಬೇಕು ಎಂದು ಆಗ್ರಹಿಸಿದರು.
ಉಸ್ತುವಾರಿ ಸಚಿವರು ಯಾರೆಂದು ಹೇಳಿ
ರಾಜ್ಯ ಸರ್ಕಾರ ಜನರಿಗಾಗಿ ಕೆಲಸ ಮಾಡಲು ಇನ್ನೂ ಮನಸ್ಸು ಮಾಡಿಲ್ಲ. ಬಹುತೇಕ ಎಲ್ಲ ಮಂತ್ರಿಗಿರಿಗಳನ್ನು ಮುಖ್ಯಮಂತ್ರಿ ಯಡಿಯೂಪ್ಪ ತನ್ನ ಬಳಿಯೇ ಇರಿಸಿಕೊಂಡಿದ್ದಾರೆ. ಹೀಗಾದರೆ ಕೆಲಸ ಮಾಡೋದು ಯಾರು ? ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು ಯಾರು ಎಂಬುದನ್ನಾದರೂ ಹೇಳಲಿ ಎಂದು ಯು.ಟಿ.ಖಾದರ್ ಒತ್ತಾಯಿಸಿದರು.







