ಮಂಗಳೂರು ವಿವಿಯಲ್ಲಿನ ಹುದ್ದೆ ನೇಮಕದಲ್ಲಿ ಭ್ರಷ್ಟಾಚಾರ: ಲೋಲಾಕ್ಷ ಆರೋಪ
ಮಂಗಳೂರು, ಸೆ.7: ‘ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹಾಗೂ ಗ್ರಂಥಪಾಲಕರ ಹುದ್ದೆಗಳಿಗೆ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ’ ಎಂದು ಕರ್ನಾಟಕ ಸಮತಾ ಸೈನಿಕ ದಳದ ಪ್ರಧಾನ ಕಾರ್ಯದರ್ಶಿ ಲೋಲಾಕ್ಷ ಗಂಭೀರ ಆರೋಪ ಮಾಡಿದ್ದಾರೆ.
ನಗರದ ಖಾಸಗಿ ಹೊಟೇಲ್‌ನಲ್ಲಿ ಶನಿವಾರ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಂಗಳೂರು ವಿವಿ ವ್ಯಾಪ್ತಿಯ ಎಂಟು ಕಾಲೇಜುಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರು ಹಾಗೂ ಗ್ರಂಥಪಾಲಕರ ಹುದ್ದೆಗಳಿಗೆ ನೇಮಕಾತಿ ನಡೆಸಲು ರಾಜ್ಯ ಸರಕಾರದ ಕಾಲೇಜು ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಎಂಟು ಕಾಲೇಜುಗಳ ಪೈಕಿ ಮೂರು ಕಾಲೇಜುಗಳಲ್ಲಿ ಅಭ್ಯರ್ಥಿಗಳಿಂದ ಹಣ ಪಡೆದು ಹುದ್ದೆಗೆ ನೇಮಕಾತಿ ಮಾಡಲಾಗಿದೆ’ ಎಂದು ಆರೋಪಿಸಿದರು.
ದ.ಕ. ಜಿಲ್ಲೆಯವರು ಬುದ್ಧಿವಂತರೆಂದು ಕರೆಸಿಕೊಂಡರೆ ಸಾಲದು, ನಡೆ-ನುಡಿಯಲ್ಲೂ ಅದು ಗೋಚರಿಸಬೇಕು. ಆದರೆ ಇಲ್ಲಿ ವ್ಯತಿರಿಕ್ತವಾಗಿ ನಡೆದುಕೊಳ್ಳಲಾಗುತ್ತಿದೆ. ಇದು ಆಘಾತಕಾರಿ ಅಂಶ. ವಿಶ್ವವಿದ್ಯಾನಿಲಯದ ಕಾಲೇಜುಗಳಲ್ಲಿ ಬೋಧನೆ ಮಾಡುವ ಪ್ರಾಧ್ಯಾಪಕರೇ ಭ್ರಷ್ಟಾಚಾರದ ಮೂಲಕ ಕಾಲೇಜು ಪ್ರವೇಶಿಸಿದರೆ, ಅಂಥವರಿಂದ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯುವುದು ಸಾಧ್ಯವೇ ಎನ್ನುವುದು ಯಕ್ಷಪ್ರಶ್ನೆಯಾಗಿ ಉಳಿದಿದೆ ಎಂದು ಹೇಳಿದರು.
ರಾಜಕಾರಣಿಗಳು, ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿಕೊಳ್ಳುವುದು ಸರ್ವೇಸಾಮಾನ್ಯ ಎಂಬಂತಾಗಿದೆ. ಇಂತಹದ್ದರಲ್ಲಿ ಶಿಕ್ಷಣ ಕೊಡುವ ಪ್ರಾಧ್ಯಾಪಕರೇ ವಾಮಮಾರ್ಗ ಹಿಡಿದು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡರೆ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ವಂಚನೆ ಮಾಡಿದಂತಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ದ.ಕ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರೆನ್ನಿ ಡಿಸೋಜ, ಬಂಟ್ವಾಳ ಎಸ್‌ವಿಎಸ್ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಸದಸ್ಯ ಗಣೇಶ ಪ್ರಭು ಮತ್ತಿತರರು ಉಪಸ್ಥಿತರಿದ್ದರು.
‘ತನಿಖೆಯ ಭರವಸೆ’
ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಎಡಪಡಿತ್ತಾಯ ಹಾಗೂ ದ.ಕ. ಜಿಲ್ಲೆಯ ಅಪರ ಜಿಲ್ಲಾಧಿಕಾರಿಯನ್ನು ಈಗಾಗಲೇ ಭೇಟಿ ಮಾಡಲಾಗಿದೆ. ಬೋಧಕರ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಕುರಿತು ಮಾಹಿತಿ ನೀಡಿದ್ದೇವೆ. ಭ್ರಷ್ಟಾಚಾರದಿಂದ ಕೂಡಿದ ಹುದ್ದೆ ಭರ್ತಿಯಾದ ಪ್ರಕ್ರಿಯೆಯನ್ನು ಕೂಡಲೇ ತಡೆಹಿಡಿಯಲು ಒತ್ತಾಯಿಸಲಾಗಿದೆ. ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ಕರ್ನಾಟಕ ಸಮತಾ ಸೈನಿಕ ದಳದ ಪ್ರಧಾನ ಕಾರ್ಯದರ್ಶಿ ಲೋಲಾಕ್ಷ ತಿಳಿಸಿದರು.







