ರೇಂಜರ್ಸ್‌ಗಳ ಸಂಖ್ಯೆ ಹೆಚ್ಚಳಕ್ಕೆ ಪ್ರಯತ್ನ: ಪಿ.ಜಿ.ಆರ್.ಸಿಂಧ್ಯಾ
ರಾಜ್ಯಮಟ್ಟದ ರೇಂಜರ್ಸ್ ಶತಮಾನೋತ್ಸವ- ಸಮಾವೇಶ ಉದ್ಘಾಟನೆ

ಉಡುಪಿ, ಸೆ.7: ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ರೇಂಜರ್ಸ್‌ಗಳ ಸರ್ವಾಂಗಿಣ ಅಭಿವೃದ್ಧಿ ಹಾಗೂ ಸಂಖ್ಯೆ ಹೆಚ್ಚಳಕ್ಕೆ ಪ್ರಯತ್ನಿಸ ಲಾಗುವುದು ಎಂದು ಸ್ಕೌಟ್ಸ್ ಆ್ಯಂಡ್ ಗೈಡ್ಸ್ ರಾಜ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಹೇಳಿದ್ದಾರೆ.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಆಶ್ರಯದಲ್ಲಿ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಶನಿವಾರ ಆರಂಭಗೊಂಡ ನಾಲ್ಕು ದಿನಗಳ ರಾಜ್ಯಮಟ್ಟದ ರೇಂಜರ್ಸ್ ಶತಮಾನೋತ್ಸವ, ರೋವರ್ಸ್ -ರೇಂಜರ್ ಮೂಟ್ ಮತ್ತು ರೋವರ್ ಸ್ಕೌಟ್ಸ್ ಲೀಡರ್- ರೇಂಜರ್ ಲೀಡರ್‌ಗಳ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ರೇಂಜರ್‌ಗಳಲ್ಲಿ ಹೆಣ್ಣು ಮಕ್ಕಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಅದರ ಅಭಿ ವೃದ್ದಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಜೀವನದಲ್ಲಿ ಸಾಧನೆ ಮಾಡಬೇಕಾದರೆ ತಂಡ ಸ್ಪೂರ್ತಿ ಅತ್ಯಗತ್ಯ. ಈ ಸ್ಪೂರ್ತಿ ಸ್ಕೌಟ್ಸ್ ಮತ್ತು ಗೈಡ್ಸ್ ಗಳಲ್ಲಿ ಇರಬೇಕಾಗಿದೆ ಎಂದು ಅವರು ತಿಳಿಸಿದರು.
ಸಮಾವೇಶವನ್ನು ಉದ್ಘಾಟಿಸಿದ ಕಲ್ಯಾಣಪುರ ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೆ.ಫಾ.ಡಾ.ಲಾರೆನ್ಸ್ ಡಿಸೋಜ ಮಾತನಾಡಿ, ಪ್ರತಿಕೂಲ ಪರಿಸ್ಥಿತಿ ಯನ್ನು ಸರಿಪಡಿಸುವ ಕಾರ್ಯ ನಮ್ಮಿಂದ ಆಗಬೇಕು. ಈ ಮೂಲಕ ಹೊಸ ಸಂಸ್ಕೃತಿಯನ್ನು ಹುಟ್ಟು ಹಾಕಬೇಕು. ಇದರಲ್ಲಿ ಸ್ವಾರ್ಥಕ್ಕೆ ಸ್ಥಾನ ಇರಬಾರದು ಮತ್ತು ಪರರಿಗೆ ಉಪಕಾರ ಮಾಡಬೇಕು ಎಂದು ಅಭಿಪ್ರಾಯ ಪಟ್ಟರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತೆ ಶಾಂತಾ ವಿ. ಆಚಾರ್ಯ, ಗೈಡ್ಸ್ ಜಂಟಿ ರಾಜ್ಯ ಕಾರ್ಯದರ್ಶಿ ಬಿ.ವಿ.ರಾಮಲತಾ, ಜಿಲ್ಲಾ ಉಪಾಧ್ಯಕ್ಷೆ ಗುಣರತ್ನ, ಜಿಲ್ಲಾ ಗೈಡ್ಸ್ ಆಯುಕ್ತೆ ಜ್ಯೋತಿ ಜೆ.ಪೈ, ಜಿಲ್ಲಾ ಕಾರ್ಯದರ್ಶಿ ಐ.ಕೆ.ಜಯಚಂದ್ರ ರಾವ್, ಪ್ರಮುಖರಾದ ಎಂ.ಜಿ.ಮೋಹನ್, ರಾಮಶೇಷ ಶೆಟ್ಟಿ, ವಾರಿಜಾ, ಜ್ಯೋತಿ ಎಚ್.ಕೆ., ಪ್ರಭಾಕರ ಭಟ್, ಫ್ಲೋರಿನ್ ಡಿಸಿಲ್ವ, ಅಶ್ವಥ್ ಭಟ್, ವಿಜಯ ಮಾಯಾಡಿ ಉಪಸ್ಥಿತರಿದ್ದರು.
ರೇಂಜರ್ ಶತಮಾನೋತ್ಸವದ ಸಂಚಾಲಕಿ ರಾಧ ವೆಂಕಟೇಶ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಸ್ಕೌಟ್ಸ್ ಜಿಲ್ಲಾ ಆಯುಕ್ತ ಡಾ.ವಿಜಯೇಂದ್ರ ವಸಂತ ಸ್ವಾಗತಿಸಿದರು. ಶಿಬಿರ ನಾಯಕ ಡಾ.ಜಯರಾಮ ಶೆಟ್ಟಿಗಾರ್ ವಂದಿಸಿದರು. ರೇಂಜರ್ ಲೀಡರ್ ವಿಭಾಗದ ನಾಯಕಿ ಜ್ಯೋತಿ ಆಚಾರ್ಯ ಹಾಗೂ ಜಿಲ್ಲಾ ಉಪಾಧ್ಯಕ್ಷೆ ಜ್ಯೋತಿ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.









