ಈಶ್ವರಪ್ಪ ಪೆದ್ದನ ರೀತಿ ಮಾತನಾಡುತ್ತಾರೆ: ಸಿದ್ದರಾಮಯ್ಯ

ಬೆಂಗಳೂರು, ಸೆ.7: ಪ್ರಧಾನಿ ನರೇಂದ್ರ ಮೋದಿ ಬಡವರ ಪರವಾಗಿಲ್ಲ, ಅವರು ಶ್ರೀಮಂತರ ಪರ. ವಿದೇಶ ಪ್ರವಾಸ ಕೈಗೊಳ್ಳುವುದಷ್ಟೇ ಅವರ ಆದ್ಯತೆ. ನೆರೆ ಪರಿಹಾರಕ್ಕಾಗಿ ರಾಜ್ಯಕ್ಕೆ ಒಂದು ಪೈಸೆ ನೆರವನ್ನೂ ನೀಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಉದ್ಯಮಿಗಳ ಜೊತೆಗಿನ ಸಮಾಲೋಚನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಪರಿಹಾರ ಕಾರ್ಯಕ್ರಮ ಕೈಗೊಳ್ಳುವಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದರು.
ನರೇಂದ್ರ ಮೋದಿ ಸೆ.7ರಂದು ಬೆಂಗಳೂರಿಗೆ ಬರುತ್ತಾರೆ, ನೆರೆ ಪರಿಹಾರಕ್ಕೆ ಹಣ ಬಿಡುಗಡೆ ಮಾಡಿಸುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದರು. ರಾಜ್ಯ ಭೀಕರ ಪ್ರವಾಹದಿಂದ ತತ್ತರಿಸಿ ಹೋಗಿದೆ. ಪ್ರಧಾನಿ ವೈಮಾನಿಕ ಸಮೀಕ್ಷೆ ಮಾಡಬಹುದಿತ್ತು. ಆದರೆ, ಅವರ ಸರಕಾರದ ಆದ್ಯತೆಗಳು ಯಾವುವು ಎಂಬುದೇ ಅರ್ಥವಾಗುತ್ತಿಲ್ಲವೆಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಜನ ಸಾಮಾನ್ಯರ ಕಷ್ಟವನ್ನು ಕೇಳದ ಮೇಲೆ ಇನ್ನೇಕೆ ನರೇಂದ್ರ ಮೋದಿ ಇಲ್ಲಿಗೆ ಬಂದಿದ್ದರು. ಯಡಿಯೂರಪ್ಪ ಮೋದಿಯನ್ನು ಬರಮಾಡಿಕೊಂಡಿದ್ದಷ್ಟೇ ಗೊತ್ತಾಗಿದ್ದು. ನಂತರ ಅವರು ಯಾರನ್ನು ಭೇಟಿ ಮಾಡಿದರು ಎಂಬುದು ಗೊತ್ತಾಗಲಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.
38 ಸಾವಿರ ಕೋಟಿ ರೂ.ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ. ನನ್ನ ಪ್ರಕಾರ 1 ಲಕ್ಷ ಕೋಟಿ ರೂ.ನಷ್ಟವಾಗಿದೆ. ಬಿಜೆಪಿ ನಾಯಕರಿಗೆ ಕೇಂದ್ರ ಸರಕಾರವನ್ನು ಒತ್ತಾಯ ಮಾಡುವ ತಾಕತ್ತಿಲ್ಲ. ಸರ್ವ ಪಕ್ಷ ನಿಯೋಗವನ್ನು ಪ್ರಧಾನಿ ಬಳಿ ಕರೆದೊಯ್ಯಲಿಲ್ಲ. ಸದನ ಕರೆಯಿರಿ ಎಂದು ಕೇಳಿದರೆ, ಅದನ್ನೂ ಮಾಡುತ್ತಿಲ್ಲ. ಬಿಜೆಪಿಯವರು ದಪ್ಪ ಚರ್ಮದವರು ಎಂದು ಅವರು ಕಿಡಿಗಾರಿದರು.
ಧಾರವಾಡದ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣವನ್ನು ರಾಜ್ಯ ಸರಕಾರ ಸಿಬಿಐಗೆ ವಹಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಈ ಪ್ರಕರಣ ಮುಕ್ತಾಯವಾಗಿದೆ. ಬಿಜೆಪಿಯವರು ರಾಜಕೀಯವಾಗಿ ಏನೇನೋ ಮಾಡುತ್ತಿದ್ದಾರೆ. ಅವರು ಇಲ್ಲೇ ಗೂಟ ಹೊಡೆದುಕೊಂಡಿರುತ್ತೇವೆ ಅಂದುಕೊಂಡಿದ್ದಾರೆ ಎಂದು ಹೇಳಿದರು.
ಕಾಲಚಕ್ರ ತಿರುಗುತ್ತಲೇ ಇರುತ್ತದೆ, ಇದು ಬಿಜೆಪಿಯವರಿಗೆ ಗೊತ್ತಿಲ್ಲ ಅನ್ನಿಸುತ್ತಿದೆ. ಅವರು ಏನು ಬೇಕಾದರೂ ಮಾಡಲಿ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಈಡಿ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಿದರೂ ಅವರನ್ನು ಬಂಧಿಸಲಾಗಿದೆ. ಅದೇ ರೀತಿ, ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರನ್ನು ಬಂಧಿಸಿದ್ದೂ ಸರಿಯಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.
ಈಶ್ವರಪ್ಪ ಪೆದ್ದನ ರೀತಿಯಲ್ಲಿ ಮಾತನಾಡುತ್ತಾರೆ. ಅವರ ಹೇಳಿಕೆಗಳಿಗೆಲ್ಲ ಉತ್ತರ ಕೊಡುವುದಿಲ್ಲ. ನೆರೆ ಸಂತ್ರಸ್ತರಿಗೆ 10 ಸಾವಿರ ರೂ.ಪರಿಹಾರ ನೀಡಿರುವುದೇ ದೊಡ್ಡ ವಿಷಯದಂತೆ ಬಿಂಬಿಸಲು ಹೊರಟಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ದೇಶದಲ್ಲಿ ಆರ್ಥಿಕ ಕುಸಿತವಾಗಿದೆ. ಇದರ ಬಗ್ಗೆ ಉದ್ಯಮಿಗಳ ಜೊತೆ ಚರ್ಚೆ ನಡೆಸಿದ್ದೇವೆ. ಆರ್ಥಿಕ ಕುಸಿತ ತಡೆಗೆ ಪಕ್ಷ ಏನು ಮಾಡಬಹುದು ಎಂಬುದರ ಕುರಿತು ವಿಚಾರ ವಿನಿಮಯ ಮಾಡಿದ್ದೇವೆ ಎಂದರು.
ಪೀಣ್ಯದ ಕೈಗಾರಿಕೆಗಳು ಸಾಕಷ್ಟು ಉದ್ಯೋಗ ನೀಡಿದ್ದವು. ಆದರೆ, ಈಗ ಕೈಗಾರಿಕೆಗಳು ಸಾಲದ ಮೇಲಿನ ಬಡ್ಡಿ ಕಟ್ಟಲು ಸಾಧ್ಯವಿಲ್ಲದ ಪರಿಸ್ಥಿತಿ ಎದುರಿಸುತ್ತಿವೆ. ಇಂತಹ ಕಂಪೆನಿಗಳನ್ನು ಕಪ್ಪು ಪಟ್ಟಿಗೆ ಸೇರಿಸುವ ಕೆಲಸ ನಡೆಯುತ್ತಿದೆ. 500, 1000 ರೂ.ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದ್ದು ಕೈಗಾರಿಕೆಗಳ ಬೆಳವಣಿಗೆಗೆ ಸಾಕಷ್ಟು ಹೊಡೆತ ನೀಡಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.
ಅವೈಜ್ಞಾನಿಕವಾಗಿ ಜಾರಿಗೆ ತಂದಿರುವ ಜಿಎಸ್‌ಟಿಯಿಂದಲೂ ಕೈಗಾರಿಕೆಗಳ ಮೇಲೆ ಹೊಡೆತ ಬಿದ್ದಿದೆ. ಇದರ ಬಗ್ಗೆ ಅವರು ಗಮನಕ್ಕೆ ತಂದಿದ್ದಾರೆ. ಕಾಸಿಯಾದವರ ಸಲಹೆಗಳನ್ನು ಪಟ್ಟಿ ಮಾಡಿದ್ದೇವೆ. ಉದ್ಯಮಿಗಳ ಜೊತೆ ನಿಲ್ಲಲು ನಾವು ತೀರ್ಮಾನಿಸಿದ್ದೇವೆ ಎಂದು ಅವರು ಹೇಳಿದರು.
ರಾಜ್ಯ ಸರಕಾರದಲ್ಲಿ ವರ್ಗಾವಣೆ ದಂಧೆ ಬಿಟ್ಟರೆ ಮತ್ತೇನು ನಡೆಯುತ್ತಿಲ್ಲ. ಪ್ರವಾಹ ಪರಿಹಾರದ ಬಗ್ಗೆ ಏನೇನೂ ಕೆಲಸಗಳು ಆಗುತ್ತಿಲ್ಲ. ಈ ಹಿಂದೆ ರಾಜ್ಯದಲ್ಲಿ ನೆರೆ ಪ್ರವಾಹ ಉಂಟಾಗಿದ್ದ ಸಂದರ್ಭದಲ್ಲಿ ಪ್ರಧಾನಿಯಾಗಿದ್ದ ಡಾ.ಮನಮೋಹನ್ ಸಿಂಗ್ ಎರಡೇ ದಿನದಲ್ಲಿ ರಾಜ್ಯಕ್ಕೆ ಭೇಟಿ ನೀಡಿ 1600 ಕೋಟಿ ರೂ.ಮಧ್ಯಂತರ ಪರಿಹಾರ ಘೋಷಿಸಿದ್ದರು.
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ