ಅಂಗವಿಕಲ ಹಕ್ಕುಗಳ ಕಾಯ್ದೆ ವಿಕಲಚೇತನರ ಸ್ವಾಭಿಮಾನಿ ಬದುಕಿಗೆ ಪೂರಕ: ವಿ.ಎಸ್.ಬಸವರಾಜು

ಚಿಕ್ಕಮಗಳೂರು, ಸೆ.7: ವಿಕಲಚೇತನರ ಕಲ್ಯಾಣಕ್ಕೆ ರಾಜ್ಯ ಸರಕಾರ ಹಲವು ಯೋಜನೆಗಳನ್ನು ಜಾರಿ ಮಾಡಿದ್ದು, ಸರಕಾರ ಅಂಗವಿಕಲರ ಹಕ್ಕುಗಳ ಕಾಯ್ದೆ-2016ರ ಅಡಿಯಲ್ಲಿ ಸರಕಾರ ಮತ್ತಷ್ಟು ಸೌಲಭ್ಯಗಳನ್ನು ನೀಡುತ್ತಿದೆ. ವಿಕಲಚೇತನರ ಸ್ವಾವಲಂಬಿ ಬುದುಕಿಗೆ ಈ ಕಾಯ್ದೆ ಅತ್ಯಂತ ಪೂರಕವಾಗಿದ್ದು, ಕಾಯ್ದೆಯ ಮಹತ್ವ, ಲಭ್ಯವಿರುವ ಸೌಲಭ್ಯಗಳು ಹಾಗೂ ಪರಿಣಾಮಕಾರಿ ಜಾರಿ ಸಂಬಂಧ ರಾಜ್ಯದ 27 ಜಿಲ್ಲೆಗಳಲ್ಲಿ ಪ್ರವಾಸಕೈಗೊಳ್ಳಲಾಗಿದೆ ಎಂದು ಅಂಗವಿಕಲರ ಅಧಿನಿಯಮಗಳ ರಾಜ್ಯ ಆಯುಕ್ತ ವಿ.ಎಸ್.ಬಸವರಾಜು ತಿಳಿಸಿದ್ದಾರೆ.
ಶನಿವಾರ ನಗರದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಗವಿಕಲರ ಹಕ್ಕುಗಳ ಕಾಯ್ದೆ-2016 ಸಂಪೂರ್ಣವಾಗಿ ವಿಕಲಚೇತನರ ಸಂಬಂಧಿಸಿದ ಕಾಯ್ದೆಯಾಗಿದೆ. ಈ ಹಿಂದೆ ಅಂಗವಿಕಲರ ಕಲ್ಯಾಣ ಕಾರ್ಯಕ್ರಮಗಳು ಮಾತ್ರ ಜಾರಿಯಲ್ಲಿದ್ದು, 2016ರ ಕಾಯ್ದೆಯಡಿಯಲ್ಲಿ ಅಂಗವಿಕಲ ಮಕ್ಕಳ ದೈಹಿಕ ನ್ಯೂನತೆ, ಮನೋ ಸಾಮರ್ಥ್ಯಗಳನ್ನು ಆರಂಭದಲ್ಲೇ ಗುರುತಿಸಿ, ಬಾಲ್ಯದಿಂದಲೇ ಅವರ ಮಾನಸಿಕ, ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಲು ಅಗತ್ಯವಿರುವ ಕಾರ್ಯಕ್ರಮಗಳನ್ನು ರೂಪಿಸಲು ಅವಕಾಶ ಕಲ್ಪಿಸಲಾಗಿದೆ. ಇಂತಹ ಮಕ್ಕಳ ಪೋಷಕರಿಗೂ ಸಂಬಂಧಿಸಿದ ಇಲಾಖೆ ತರಬೇತಿ ಕಾರ್ಯಕ್ರಮದ ಮೂಲಕ ವಿಕಲಚೇತನ ಮಕ್ಕಳ ಆರೈಕೆ ವಿಧಾನಗಳ ಬಗ್ಗೆ ಅರಿವು ಮೂಡಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
1995ರ ಕಾಯ್ದೆಯಡಿಯಲ್ಲಿ ಸರಕಾರದ ಪ್ರತೀ ಇಲಾಖೆಗಳ ಶೇ.3ರಷ್ಟು ಅನುದಾನವನ್ನು ಅಂಗವಿಕಲರ ಕಲ್ಯಾಣಕ್ಕೆ ವಿನಿಯೋಗಿಸಲು ಅವಕಾಶವಿತ್ತು. ನೂತನ ಕಾಯ್ದೆಯನ್ವಯ ಗ್ರಾಪಂ, ಪಟ್ಟಣ ಪಂಚಾಯತ್ ಹಾಗೂ ನಗರ ಪ್ರದೇಶಗಳ ಸ್ಥಳೀಯ ಸಂಸ್ಥೆಗಳೂ ಸೇರಿದಂತೆ ಪ್ರತೀ ಇಲಾಖೆಗಳು ಶೇ.5ರಷ್ಟು ಅನುದಾನವನ್ನು ಅಂಗವಿಕಲರ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿಟ್ಟು, ವಿಕಲಚೇತನರ ವಯಸ್ಸಿಗನುಗುಣವಾಗಿ ಸೌಲಭ್ಯ, ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ ಎಂದರು.
ಅಂಗವಿಕಲರಿಗೆ ಕಲ್ಯಾಣ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಪ್ರತೀ ಜಿಲ್ಲೆಗಳಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಅವರ ಅಧೀನದಲ್ಲಿ ಡಿಇಸಿಟಿ (ಜಿಲ್ಲಾ ಶೀಘ್ರ ಪತ್ತೆ ಮತ್ತು ಪುನರ್ವಸತಿ ಕೇಂದ್ರ) ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈ ಕೇಂದ್ರಗಳಲ್ಲಿ ತಜ್ಞರು ಅಂಗವೈಕಲ್ಯಕ್ಕೊಳಗಾದವರ ತಪಾಸಣೆ, ಪತ್ತೆ, ಪುನರ್ವಸತಿಯೊಂದಿಗೆ ಸೂಕ್ತ ಚಿಕಿತ್ಸೆಗಳಿಗೆ ಶಿಫಾರಸು ಮಾಡುತ್ತಾರೆ. ಸೂಕ್ತ ಚಿಕಿತ್ಸೆಯ ಅಗತ್ಯವಿರುವವರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯಡಿಯಲ್ಲಿ 5 ಲಕ್ಷ ರೂ. ವರೆಗಿನ ವೈದ್ಯಕೀಯ ನೆರವನ್ನೂ ಈ ಕೇಂದ್ರದ ಮೂಲಕ ಪಡೆಯಬಹುದಾಗಿದೆ.
ಅಂಗವಿಕಲ ಮಕ್ಕಳ ದೈಹಿಕ ನ್ಯೂನತೆಗಳನ್ನು ಗುರುತಿಸಿ ಅವರ ಶೈಕ್ಷಣಿಕ ಬದುಕಿಗೆ ನೆರವಾಗುವ ಮೂಲಕ ಸ್ವಾವಲಂಬಿಗಳನ್ನಾಗಿಸುವ, ಸಾಮಾನ್ಯ ಮಕ್ಕಳಂತೆಯೇ ಶಾಲಾ ಕಾಲೇಜುಗಳಿಗೆ ಹೋಗಲು ನೆರವಾಗುವಂತಹ ರಚನಾತ್ಮಕ ಕಲ್ಯಾಣ ಕಾರ್ಯಕ್ರಮಗಳನ್ನು ಈ ಕೇಂದ್ರ ನಿರ್ವಹಿಸುತ್ತಿದೆ. ಈ ಕೇಂದ್ರದ ಮೂಲಕವೇ ಅಂಗವೈಕಲ್ಯಕ್ಕೆ ತುತ್ತಾದವರ ತಾಯಂದಿರಿಗೆ ಮಕ್ಕಳ ಪೋಷಣೆಗೆ ಅಗತ್ಯ ಮಾಹಿತಿ, ತರಬೇತಿಯನ್ನೂ ನೀಡಲಾಗುತ್ತದೆ ಎಂದ ಅವರು, ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆಯಲ್ಲಿ ಡಿಇಸಿಟಿ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯಲ್ಲಿ ವಿಕಲಚೇತನರು ಈ ಕೇಂದ್ರದ ನೆರವು ಪಡಿದಿದ್ದಾರೆ. ಡಿಇಸಿಟ ಕೇಂದ್ರದ ಬಗ್ಗೆ ಹೆಚ್ಚಿನ ಪ್ರಚಾರ, ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖಾಧಿಕಾರಿಗಳ ಸಭೆ ನಡೆಸಿ ಕ್ರಮಕ್ಕೆ ಸೂಚಿಸಲಾಗಿದೆ ಎಂದರು.
ಸಂಬಂಧಿಸಿದ ಇಲಾಖೆಗಳು ಅಂಗವಿಕಲ ಕಲ್ಯಾಣಕ್ಕೆ ಮೀಸಲಿಡಬೇಕಾದ ಶೇ.5ರಷ್ಟು ಅನುದಾನಗಳನ್ನು ಬಳಸಿಕೊಂಡು ಡೇ ಕೇರ್ ಸೆಂಟರ್ ಗಳನ್ನು ಆರಂಭಿಸಬಹುದಾಗಿದೆ. ಇಲ್ಲಿನ ಶಿಕ್ಷಕರು ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸುವುದು ಕಡ್ಡಾಯವಾಗಿದೆ. ಶಾಲಾ ಕಾಲೇಜುಗಳಿಗೆ ಹೋಗುವ ಇಂತಹ ಮಕ್ಕಳಿಗೆ ಹಾಸ್ಟೆಲ್‍ಗಳಲ್ಲಿ ಶೇ.10 ಮೀಸಲು ಕಲ್ಪಿಸಬೇಕು. ಈ ಸಂಬಂಧ ಸರಕಾರ ಈ ಹಿಂದೆಯೇ ಆದೇಶ ಹೊರಡಿಸಿದೆ ಎಂದು ಆಯುಕ್ತ ವಿ.ಎಸ್.ಬಸವರಾಜ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಂಗವಿಕಲರ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೃಷ್ಣಪ್ಪ, ಉಪ ಆಯುಕ್ತ ಪದ್ಮನಾಭ, ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಶಿವಪ್ರಕಾಶ್ ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಅಂದಾಜು 30 ಸಾವಿರ ಅಂಗವಿಕಲರಿದ್ದಾರೆ. ಈ ಪೈಕಿ ಶೇ.18ರಷ್ಟು ಮಂದಿ 18 ವರ್ಷದೊಳಗಿನವರಾಗಿದ್ದು, 10-12 ಸಾವಿರ ಮಂದಿ ಶಾಲಾ ಕಾಲೇಜುಗಳಿಗೆ ಹೋಗುತ್ತಿದ್ದಾರೆ. ಶೇ.90ರಷ್ಟು ಮಂದಿ ಅಂಗವಿಲಕಲರ ವೇತನ ಪಡೆಯುತ್ತಿದ್ದಾರೆ. ವಿಕಲಚೇತನರ ಸೌಲಭ್ಯಗಳನ್ನು ನಕಲಿ ದಾಖಲೆ ನೀಡಿ ದುರುಪಯೋಗಪಡಿಸಿಕೊಳ್ಳುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಈ ಬಗ್ಗೆ ದೂರು ನೀಡಿದಲ್ಲಿ ಸಮಿತಿಗಳ ಮೂಲಕ ಪರಿಶೀಲನೆ ಮಾಡಿ ಕ್ರಮಕೈಗೊಳ್ಳಲಾಗುವುದು. ಹಾಸನ ಜಿಲ್ಲೆಯಲ್ಲಿ ಇಂತಹ 54 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಅಂಗವಿಕಲರ ಸೌಲಭ್ಯಗಳ ದುರುಪಯೋಗ ನಿಯಂತ್ರಣಕ್ಕೆ ಯುಡಿಐಸಿ ಕಾರ್ಡ್‍ಗಳನ್ನು ಎಲ್ಲ ವಿಕಲಚೇತನರು ಹೊಂದವುದನ್ನು ಕಡ್ಡಾಯ ಮಾಡಲಾಗಿದೆ. ಅಂಗವಿಕಲರಿಗೆ ನೀಡುವ ದ್ವಿಚಕ್ರವಾಹನಗಳಿಗೆ ಶೇ.5ರ ಹಣವನ್ನು ಬಳಕೆ ಮಾಡದಿರುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಇದಕ್ಕಾಗಿ ಶಾಸಕರ ಅನುದಾನ ಬಳಕೆ ಮಾಡಬಹುದಾಗಿದೆ. ಸೌಲಭ್ಯ ವಿತರಣೆಗೆ ಅಧಿಕಾರಿಗಳು ಮಾರ್ಗಸೂಚಿಗಳನ್ನೂ ಅನುಸರಿಸುವುದು, ಪಾರದರ್ಶಕತೆ ಕಾಯ್ದುಕೊಳ್ಳುವುದು ಅತ್ಯಗತ್ಯವಾಗಿದೆ.
- ವಿ.ಎಸ್.ಬಸವರಾಜು, ಅಂಗವಿಕಲರ ಅಧಿನಿಯಮಗಳ ರಾಜ್ಯ ಆಯುಕ್ತ







