ಅ.6ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ
ಬೆಂಗಳೂರು, ಸೆ.7: ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಮಹಿಳೆಯರು ಮತ್ತು ಮಕ್ಕಳಿಗೆ ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ ಮತ್ತು ಕಬ್ಬನ್ ಪಾರ್ಕ್ ನಡಿಗೆದಾರರ ಸಂಸ್ಥೆ (ಎನ್‌ಜಿಒ) ವತಿಯಿಂದ ಅ.6ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಉಮೇಶ್ ಅವರು, ದಕ್ಷಿಣ ಭಾರತದಲ್ಲಿ ಇದೇ ಪ್ರಥಮ ಬಾರಿಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಕ್ಕಳು ಮತ್ತು ಮಹಿಳೆಯರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಈಗಾಗಲೇ ನಾಲ್ಕು ದೇಶದ ಪ್ರತಿನಿಧಿಗಳು ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದು, ಇನ್ನೂ 30 ದೇಶಗಳಿಂದ ನೋಂದಣಿ ನಿರೀಕ್ಷೆಯಲ್ಲಿದ್ದೇವೆ. ಸುಮಾರು 50 ಮಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.
ಕರ್ನಾಟಕದಲ್ಲಿ ಮಿಸ್ ಏಷ್ಯಾದ ಶ್ರುತಿ, ರಮ್ಯ ಸೇರಿದಂತೆ 11 ಮಂದಿ ಹೆಸರು ನೋಂದಣಿಯಾಗಿದೆ. ಬೆಂಗಳೂರು, ಉಡುಪಿ, ಮಂಗಳೂರು, ಮಡಿಕೇರಿ ಸೇರಿದಂತೆ ಹಲವು ಜಿಲ್ಲೆಗಳಿಂದ ಹೆಸರುಗಳು ಸದ್ಯದಲ್ಲೇ ನೋಂದಣಿಯಾಗಲಿವೆ. ಆಸ್ಟ್ರೇಲಿಯಾದ ಮಾರ್ಸಿಯಾ, ಜಿಂಬಾಬ್ವೆ ಡಾ.ಕರೋಲಿನಾ, ದಕ್ಷಿಣ ಆಫ್ರಿಕಾದ ರೋಹಾಸ್, ಹಾಗೂ ನೇಪಾಳದ ಆನಂದ್ ಸೇರಿದಂತೆ ಹಲವರು ಹೆಸರು ನೋಂದಣಿಯಾಗಿದೆ ಎಂದು ತಿಳಿಸಿದರು.
ಸಮಾರಂಭವನ್ನು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ಉಪಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ್, ಹಿರಿಯ ಚಲನಚಿತ್ರ ನಟಿ ಲೀಲಾವತಿ, ರಾಘವೇಂದ್ರ ರಾಜ್‌ಕುಮಾರ್, ಸಾಲುಮರದ ತಿಮ್ಮಕ್ಕ ಒಳಗೊಂಡಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದರು.







