ಅನ್ನಭಾಗ್ಯ ಯೋಜನೆಯಿಂದ ರಾಜ್ಯದಲ್ಲಿ ಕೂಲಿ ಕಾರ್ಮಿಕರು ಸಿಗುತ್ತಿಲ್ಲ: ವಿಆರ್‌ಎಲ್ ಅಧ್ಯಕ್ಷ ವಿಜಯ್ ಸಂಕೇಶ್ವರ್
ಸಾಧಕರೊಂದಿಗೆ ಸಂವಾದ

ಬೆಂಗಳೂರು, ಸೆ.7: ಸಿದ್ದರಾಮಯ್ಯ ಜಾರಿ ಮಾಡಿದ ಒಂದು ರೂ.ಗೆ ಒಂದು ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಯಿಂದ ರಾಜ್ಯದಲ್ಲಿ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂದು ವಿಆರ್‌ಎಲ್ ಸಂಸ್ಥೆಯ ಅಧ್ಯಕ್ಷ ವಿಜಯ್ ಸಂಕೇಶ್ವರ್ ಬೇಸರ ವ್ಯಕ್ತಪಡಿಸಿದ್ದಾರೆ.
ಶನಿವಾರ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆ ಜಾರಿಯಾದ ನಂತರ ನಮ್ಮ ಸಂಸ್ಥೆಗೆ ಬೇಕಾದ ಉದ್ಯೋಗಿಗಳನ್ನು ಉತ್ತರ ಭಾರತದಿಂದ ಹಣಕೊಟ್ಟು ಕರೆಸಿಕೊಳ್ಳಬೇಕಾದ ಅನಿವಾರ್ಯತೆ ಪ್ರಾರಂಭವಾಗಿದೆ ಎಂದು ತಿಳಿಸಿದರು.
ಯಾವ ಉದ್ಯಮ ನಷ್ಟವಾಗುತ್ತದೆಯೆಂದು ಇತರೆ ಉದ್ಯಮಿಗಳು ನಿರ್ಧರಿಸಿ ಅದರಿಂದ ದೂರು ಇರುತ್ತಾರೆಯೋ, ಅದೇ ಉದ್ಯಮದಲ್ಲಿ ತೊಡಗಿ ಯಶಸ್ವಿಯಾಗಲು ಇಷ್ಟ ಪಡುತ್ತೇನೆ. ಅದಕ್ಕಾಗಿಯೇ ಸಾರಿಗೆ ಹಾಗೂ ಪತ್ರಿಕೋದ್ಯಮದಲ್ಲಿ ತೊಡಗಿ ದೇಶದಲ್ಲೇ ಅತಿದೊಡ್ಡ ಸಾರಿಗೆ ಸಂಸ್ಥೆಯನ್ನು ಕಟ್ಟಿದ್ದೇನೆಂದು ಅವರು ತಿಳಿಸಿದರು.
ಯಾವ ಉದ್ಯಮ ನಕಲು ಹಾಗೂ ವಾಮಮಾರ್ಗದಲ್ಲಿ ತೊಡಗುತ್ತದೆಯೋ, ಅಲ್ಲಿಂದಲೇ ಅವನತಿ ಪ್ರಾರಂಭವಾಗುತ್ತದೆ. ಆರ್ಥಿಕ ಶಿಸ್ತಿನಿಂದ ಮಾತ್ರ ಉದ್ಯಮವನ್ನು ಯಶಸ್ಸಿನತ್ತ ಕೊಂಡೊಯ್ಯಲು ಸಾಧ್ಯ. ಇದನ್ನು ಅನುಸರಿಸದ ಕಾರಣದಿಂದಾಗಿಯೇ ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಳ್ಳುವುದು, ಇಲ್ಲವೇ ವಿದೇಶಕ್ಕೆ ಓಡಿಹೋಗುವಂತಹ ಕೃತ್ಯವನ್ನು ಎಸಗುತ್ತಾರೆಂದು ಅವರು ಅಭಿಪ್ರಾಯಿಸಿದರು.
ನರೇಂದ್ರ ಮೋದಿ ಜಾರಿ ಮಾಡಿದ ನೋಟು ನಿಷೇಧ ಹಾಗೂ ಜಿಎಸ್‌ಟಿಯಿಂದ ದೇಶವು ಆರ್ಥಿಕತೆ ಸಂಕಷ್ಟಕ್ಕೆ ಸಿಲುಕಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ದೇಶ ಎದುರಿಸುತ್ತಿರುವ ಆರ್ಥಿಕ ಸಂಕಷ್ಟಕ್ಕೆ ಮೋದಿ ಕಾರಣರಲ್ಲ. ಮನಮೋಹನ್ ಸಿಂಗ್ ಆಡಳಿತದ ಹತ್ತು ವರ್ಷದಲ್ಲಿ ದೇಶದಿಂದ ಭ್ರಷ್ಟಾಚಾರದ ರೂಪದಲ್ಲಿ ಸಾಕಷ್ಟು ಹಣ ವಿದೇಶಕ್ಕೆ ಹೋಗಿರುವುದೆ ಆರ್ಥಿಕ ಕುಸಿತಕ್ಕೆ ಕಾರಣ.
-ವಿಜಯ್ ಸಂಕೇಶ್ವರ್, ಅಧ್ಯಕ್ಷ, ವಿಆರ್‌ಎಲ್ ಸಂಸ್ಥೆ







