ವಿದ್ಯಾರ್ಥಿ ಸಾವು: ವೈದ್ಯರ ವಿರುದ್ಧ ದೂರು
ಮೂಡುಬಿದಿರೆ: ವಿದ್ಯಾರ್ಥಿಯೋರ್ವನ ಸಾವಿಗೆ ನಿರ್ಲಕ್ಷ್ಯದ ಚಿಕಿತ್ಸೆಯೇ ಕಾರಣ ಎಂದು ಆರೋಪಿಸಿ ವೈದ್ಯರ ವಿರುದ್ಧ ಪೋಷಕರು ಮೂಡುಬಿದಿರೆ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕಲ್ಲಮುಂಡ್ಕೂರು ಉರ್ಲೊಟ್ಟು ನಿವಾಸಿ ಸುರೇಶ್ ಶಾರದಾ ದಂಪತಿಯ ಪುತ್ರ, ಮುಂಡ್ಕೂರಿನ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಸುಧೀಶ್ (17) ಆ. 22ರಂದು ಕಾಲೇಜಿನಲ್ಲಿ ಕಬಡ್ಡಿ ಆಡುತ್ತಿದ್ದ ವೇಳೆಗೆ ಎಡಕಾಲಿನ ಮಂಡಿ ಹಿಂಬದಿ ಒಳ ನೋವು ಕಾಣಿಸಿಕೊಂಡಿದೆ. ಆ.26ರಂದು ಸುಧೀಶ್ ಮೂಡುಬಿದಿರೆ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ ಎಕ್ಸ್ ರೇ ಮಾಡಿಸಿಕೊಂಡಾಗ ಮೂಳೆಗೆ ಹಾನಿಯಾಗಿಲ್ಲ ಎಂದಿದ್ದರು. ಆದರೆ ಬಳಿಕ ಮೂಡುಬಿದಿರೆಯ ಆಸ್ಪತ್ರೆಯಲ್ಲಿ ವೈದ್ಯರಾದ ಡಾ. ಗುರುಪ್ರಸಾದ್ ಮೂಳೆ ಹಾನಿಯಾಗಿದೆ ಎಂದು ಸಿಮೆಂಟ್ ಪ್ಲಾಸ್ಟರಿಂಗ್ ಮಾಡಿದ್ದಾರೆ. ಬಳಿಕ ಸುಧೀಶ್ ಕಾಲು ನೋವು ಉಲ್ಬಣಗೊಂಡಿದ್ದು, ನಂತರ ಸುರತ್ಕಲ್‍ನ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆದಿದ್ದರೂ ಗುಣಮುಖರಾಗದೇ ಅತ್ತಾವರದ ಆಸ್ಪತ್ರೆಗೆ ದಾಖಲಿಸಿ, ಅಲ್ಲಿ ತಪಾಸಣೆ ವೇಳೆಗೆ ಸುಧೀಶ್ ಜೀವಕ್ಕೆ ಅಪಾಯವಿದ್ದ ಕಾರಣ ಮನೆಯವರ ಒಪ್ಪಿಗೆ ಪಡೆದು ಆ.30ರಂದು ಎಡಗಾಲನ್ನು ಕತ್ತರಿಸಿ ಚಿಕಿತ್ಸೆ ನೀಡಲಾಗಿದೆ. ಆದರೆ ಸುಧೀಶ್ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. ಈ ಸಾವಿಗೆ ಮೂಡುಬಿದಿರೆಯಲ್ಲಿ ವೈದ್ಯರ ಚಿಕಿತ್ಸೆಯಲ್ಲಿನ ನಿರ್ಲಕ್ಷವೇ ಕಾರಣ ಎಂದು ಸುಧೀಶ್‍ನ ಮಾವ ಕರುಣಾಕರ್ ಮೂಡುಬಿದಿರೆ ಠಾಣೆಗೆ ನೀಡಿದ ದೂರಿನಲ್ಲಿ ದಾಖಲಿಸಿದ್ದಾರೆ.





