ಪ್ರಜಾಸತ್ತೆಯ ಮೌಲ್ಯಕ್ಕಾಗಿ ಅಧಿಕಾರಿಶಾಹಿ ವಿರುದ್ಧ ಹೋರಾಟ ಅನಿವಾರ್ಯ: ಜಿ. ರಾಜಶೇಖರ್

ಉಡುಪಿ, ಸೆ.8: ದೇಶದ ಮಾಧ್ಯಮಗಳಿಗೆ ಬಡವರ ನೋವು, ಹತಾಶೆ, ಅಳು ಕೇಳಿಸುತ್ತಿಲ್ಲ. ಮೋದಿ ಸರಕಾರ ಅಧಿಕಾರಕ್ಕೆ ಬಂದ ಜೊತೆಗೆ ಪತ್ರಿಕೋದ್ಯಮದ ಕರಾಳ ಅಧ್ಯಾಯ ಕೂಡ ಆರಂಭವಾಗಿದೆ. ಈ ಪ್ರಜಾಸತ್ತೆ ಹಾಗೂ ಮೌಲ್ಯಗಳು ಉಳಿಯಬೇಕಾದರೆ ಪ್ರಸ್ತುತ ಇರುವ ಅಧಿಕಾರಿಶಾಹಿ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯವಾಗಿದೆಂದು ಹಿರಿಯ ಚಿಂತಕ ಜಿ. ರಾಜಶೇಖರ್ ಹೇಳಿದ್ದಾರೆ.
ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಹಾಗೂ ಗೌರಿ ಬಳಗ ಉಡುಪಿ ಜಿಲ್ಲೆ ಇದರ ವತಿಯಿಂದ ರವಿವಾರ ಉಡುಪಿ ಮುಸ್ಲಿಮ್ ವೆಲ್‌ಫೇರ್ ಅಸೋಸಿಯೇಶನ್ ಕಚೇರಿಯಲ್ಲಿ ಆಯೋಜಿಸಲಾದ ಗೌರಿ ಸಂಸ್ಮರಣೆ ಹಾಗೂ ಗೌರಿ ಬಳಗವನ್ನು ‘ನ್ಯಾಯ ಪಥ’ ವಾರಪತ್ರಿಕೆಯ ವಿವಿಧ ಸಂಚಿಕೆಗಳನ್ನು ಅನಾವರಣ ಗೊಳಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಈ ದೇಶದಲ್ಲಿ ಯಾವತ್ತೂ ಕೂಡ ನಿರಾಶಿತರಾಗಿರುವ ಬಡ ಜನರ ಸಂಕಷ್ಟ ಗಳು ಇದೀಗ ಇನ್ನಷ್ಟು ಜಾಸ್ತಿಯಾಗಿದೆ. ಎಲ್ಲ ಕಡೆ ಶ್ರೀಮಂತರ ದುರಾಹಂಕಾರ ಹೆಚ್ಚಾಗುತ್ತಿದೆ. ಕೊಬ್ಬಿದ ಶ್ರೀಮಂತರ ಹಾಗೂ ಅಟ್ಟಹಾಸದಲ್ಲಿ ಮೆರೆಯುತ್ತಿರುವ ಅಧಿಕಾರಿಶಾಹಿಗಳಿಂದ ಬಡವರ ಆಕ್ರಂದನ ಯಾರಿಗೂ ಕೇಳಿಸುತ್ತಿಲ್ಲ ಎಂದು ಅವರು ಖೇಧ ವ್ಯಕ್ತಪಡಿಸಿದರು.
ಮೋದಿ ಸರಕಾರ ಆದಷ್ಟು ಬೇಗ ತೊಲಗಬೇಕು. ಜನ ವಿರೋಧಿಯಾಗಿರುವ ಮೋದಿ ಸರಕಾರ ಜನರ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಈ ಸರಕಾರ ಬೇಗ ತೊಲಗಿದಷ್ಟು ಪ್ರಜಾಸತ್ತೆ ಮೌಲ್ಯಗಳಿಗೆ ಅನುಕೂಲವಾಗುತ್ತದೆ. ಈ ಉದ್ದೇಶ ಇಟ್ಟುಕೊಂಡು ಹೋರಾಟ ನಡೆಸಬೇಕಾಗಿದೆ ಎಂದು ಅವರು ತಿಳಿಸಿದರು.
ಗೌರಿ ಲಂಕೇಶ್ ತೀರಿ ಹೋದ ಬಳಿಕ ಬಹಳ ಸಮಯ ಶೂನ್ಯ ಕಾಡುತ್ತಿತ್ತು. ಕರ್ನಾಟಕ ಪತ್ರಿಕೋದ್ಯಮದಲ್ಲಿ ಇನ್ನೂ ಎಂದಿಗೂ ಗೌರಿ ಬಿಟ್ಟು ಹೋದ ಜಾಗ ವನ್ನು ತುಂಬಿಸಲು ಸಾಧ್ಯವಿಲ್ಲ ಎಂಬ ವಿಚಾರ ಆವರಿಸಿಕೊಂಡಿತ್ತು. ಇದೀಗ ಗೌರಿ ಬಳಗದ ಮೂಲಕ ಆ ನೋವು ಸ್ವಲ್ಪ ಮಟ್ಟಿಗೆ ನಿವಾರಣೆಯಾಗುವ ಆಶಾವಾದ ಕಂಡುಬರುತ್ತಿದೆ ಎಂದು ಅವರು ಹೇಳಿದರು.
ಗೌರಿ ಲಂಕೇಶ್ ಧರ್ಮ ನಿರಪೇಕ್ಷ ಧೋರಣೆಯ ಪರ ಧ್ವನಿ ಹಾಗೂ ಹೋರಾಟ ನಡೆಸುತ್ತಿದ್ದರು. ಅದೇ ಕಾರಣಕ್ಕೆ ಆಕೆ ಹುತಾತ್ಮರಾದರು. ಗೌರಿ ಹೋರಾಡಿದ ಮೌಲ್ಯಗಳಿಗೆ ನಮ್ಮನ್ನು ನಾವು ಅರ್ಪಿಸಿಕೊಳ್ಳುವುದೇ ಆಕೆಗೆ ಅರ್ಪಿಸುವ ನಿಜವಾದ ಶ್ರದ್ಧಾಂಜಲಿಯಾಗಿದೆ. ಆದುದರಿಂದ ಇದು ನೆನಪಿನ ದಿನ ಮಾತ್ರವಲ್ಲ, ಅರ್ಪಣೆಯ ಸಂಕಲ್ಪ ದಿನವೂ ಆಗಿದೆ. ಗೌರಿ ಹೋರಾಡಿದ ಮೌಲ್ಯಗಳಿಗೊಸ್ಕರ ನಾವು ಸಮರ್ಪಿಸಿಕೊಳ್ಳಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಎ.ಕೆ.ಸುಬ್ಬಯ್ಯ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಚಿಂತಕರಾದ ಹಯವದನ ಮೂಡಸಗ್ರಿ, ವರದ ರಾಜ ಬಿರ್ತಿ, ಸಂವರ್ತ್ ಸಾಹಿಲ್, ಹುಸೇನ್ ಕೋಡಿಬೆಂಗ್ರೆ, ಶಾರೂಕ್ ತೀರ್ಥಹಳ್ಳಿ ಗೌರಿ ಲಂಕೇಶ್‌ಗೆ ನುಡಿನಮನ ಸಲ್ಲಿಸಿದರು.
ಹಿರಿಯ ಲೇಖಕ ಗೋಪಾಲ ಬಿ.ಶೆಟ್ಟಿ, ಧರ್ಮಗುರು ಫಾ.ವಿಲಿಯಂ ಮಾರ್ಟಿಸ್ ಉಪಸ್ಥಿತರಿದ್ದರು. ವೇದಿಕೆಯ ಉಪಾಧ್ಯಕ್ಷ ಪ್ರೊ.ಫಣಿರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದ್ರೀಸ್ ಹೂಡೆ ವಂದಿಸಿದರು. ದಿನಕರ ಬೆಂಗ್ರೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.







