ಆರೋಗ್ಯದಿಂದ ಸಾಧನೆ ಮಾಡಲು ಸಾಧ್ಯ: ಪಲಿಮಾರು ಶ್ರೀ
ಉಚಿತ ನೇತ- ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ

ಉಡುಪಿ, ಸೆ.8: ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಶ್ರೀ ಧನ್ವಂತರಿ ಚಿಕಿತ್ಸಾಲಯ, ಕಲ್ಯಾಣಪುರ ಲಯನ್ಸ್ ಕ್ಲಬ್, ಜಿಲ್ಲಾ ಆರೋಗ್ಯ ಸೊಸೈಟಿ ಅಂಧತ್ವ ನಿಯಂತ್ರಣ ವಿಭಾಗ, ಉಡುಪಿ ಸಂಚಾರಿ ನೇತ್ರ ಘಟಕ, ಜಿಲ್ಲಾ ಆಸ್ಪತ್ರೆ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಮತ್ತು ಮಹಿಳೆಯರ ಆರೋಗ್ಯ ತಪಾಸಣಾ ಶಿಬಿರವನ್ನು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ರವಿವಾರ ಆಯೋಜಿಸಲಾಗಿತ್ತು.
ಶಿಬಿರವನ್ನು ಉದ್ಘಾಟಿಸಿದ ಪರ್ಯಾಯ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಮಾತನಾಡಿ, ನಾವು ಆರೋಗ್ಯದಿಂದ ಇದ್ದರೆ ಯಾವುದೇ ದೊಡ್ಡ ಸಾಧನೆಯನ್ನು ಮಾಡಬಹುದು. ನಮ್ಮ ದೇಹದೊಳಗಿರುವ ಕಾಯಿಲೆಗಳು ನಮ್ಮ ಕಣ್ಣಿಗೆ ಕಾಣುವುದಿಲ್ಲ. ಅದು ಉಲ್ಬಣಗೊಳ್ಳುವುದಕ್ಕಿಂತ ಮೊದಲು ಅದನ್ನು ಪರೀಕ್ಷಿಸಿ ಅದಕ್ಕೆ ಸರಿಯಾದ ಚಿಕಿತ್ಸೆ ಮಾಡಿದರೆ ಗುಣಮುಖ ವಾಗಬಹುದು ಎಂದರು.
ಮನುಷ್ಯನಿಗೆ ಕಣ್ಣು ಬಹಳ ಪ್ರಮುಖವಾದ ಅಂಗ. ಇದನ್ನು ಕಾಪಾಡಿ ಕೊಳ್ಳುವುದು ನಮ್ಮ ಜವಾಬ್ದಾರಿಯಾಗಿರುವ ದೃಷ್ಟಿಯಿಂದ ಇಂತಹ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗುತ್ತಿದೆ. ಫಲಾನುಭವಿಗಳು ಈ ಶಿಬಿರದ ಸದುಪ ಯೋಗ ಪಡೆದುಕೊಳ್ಳಬೇಕು ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ.ಅಶೋಕ್, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಡಾ.ನಿತ್ಯಾನಂದ ನಾಯಕ್, ಡಾ.ರೇಣುಕಾ ಮಟ್ಟಿ, ಬಾಲಾಜಿ ರಾಘವೇಂದ್ರ ಆಚಾರ್ಯ, ಎಸ್.ಟಿ.ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.
ಮೈಸೂರು ಎನ್.ಜಿ.ಫೌಂಡೇಶನಿನ ವ್ಯವಸ್ಥಾಪಕ ಗುರು ರಾಜ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಯನ್ಸ್ ಕ್ಲಬ್‌ನ ಪಿ.ಎ.ಭಟ್ ಕಾರ್ಯ ಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.







