'ಇಂದಿರಾ ಕ್ಯಾಂಟೀನ್'ಗಾಗಿ ಜಾಗ ಒತ್ತುವರಿ: ಕೆಪಿಟಿಸಿಎಲ್ ಪ್ರಕರಣ ಇತ್ಯರ್ಥಪಡಿಸಲಿದೆ- ಹೈಕೋರ್ಟ್‌ಗೆ ಹೇಳಿಕೆ

ಬೆಂಗಳೂರು, ಸೆ.8: ರಾಜಾಜಿನಗರ 3ನೆ ಬ್ಲಾಕ್‌ನಲ್ಲಿರುವ ಟ್ರೀಪಾರ್ಕ್‌ನಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜಾಗ ಒತ್ತುವರಿ ಮಾಡಿದೆ ಎಂದು ಆರೋಪಕ್ಕೆ ಸಂಬಂಧಿಸಿದ ಪ್ರಕರಣವನ್ನು ಮುಖ್ಯ ಕಾರ್ಯದರ್ಶಿ ಇತ್ಯರ್ಥಪಡಿಸಲಿದ್ದಾರೆ ಎಂದು ಕೆಪಿಟಿಸಿಎಲ್ ಹೈಕೋರ್ಟ್‌ಗೆ ತಿಳಿಸಿದೆ.
ರಾಜಾಜಿನಗರ ನಿವಾಸಿಗಳಾದ ಗೀತಾ ಮಿಶ್ರಾ ಸೇರಿ ನಾಲ್ವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಲೇವಾರಿ ಮಾಡಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ(ಕೆಪಿಟಿಸಿಎಲ್) ಪರವಾಗಿ ಹಾಜರಿದ್ದ ವಕೀಲ ಶ್ರೀರಂಗ ಸುಬ್ಬಣ್ಣ, ಈ ಕುರಿತಂತೆ ನ್ಯಾಯಪೀಠಕ್ಕೆ ವಿವರಿಸಿದರು. ವಿವಾದಿತ ಪ್ರದೇಶದ ಕಂದಾಯ ಖಾತೆ ಮತ್ತು ಸಂಬಂಧಿಸಿದ ಮೂಲ ದಾಖಲೆಗಳು ಕೆಪಿಟಿಸಿಎಲ್ ಸುಪರ್ದಿಯಲ್ಲಿವೆ. ಆದಾಗ್ಯೂ ಅರ್ಜಿದಾರರ ಆಕ್ಷೇಪಣೆ ಮತ್ತು ಅಹವಾಲುಗಳನ್ನು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಆಲಿಸಿ ಇತ್ಯರ್ಥಪಡಿಸಲಿದ್ದಾರೆ ಎಂದು ತಿಳಿಸಿದರು.
ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಮೂರು ತಿಂಗಳಲ್ಲಿ ಅರ್ಜಿದಾರರ ಅಹವಾಲು ಆಲಿಸಿ ಪ್ರಕರಣ ಇತ್ಯರ್ಥಪಡಿಸುವಂತೆ ನಿರ್ದೇಶಿಸಿತು. ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್ ವಾದ ಮಂಡಿಸಿದರು.
ಆಕ್ಷೇಪಣೆ ಏನು: ಬಿಡಿಎಗೆ ಸೇರಿದ್ದ 23.14 ಎಕರೆ ಜಮೀನನ್ನು 1949ರಲ್ಲಿ ಅಂದಿನ ನಗರಾಭಿವೃದ್ಧಿ ಪ್ರಾಧಿಕಾರವು ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಗೆ(ಕೆಇಬಿ) ಮಂಜೂರು ಮಾಡಿತ್ತು. ಈ ಪೈಕಿ 6.1 ಎಕರೆಯನ್ನು ಹೆಚ್ಚುವರಿ ಜಮೀನು ಎಂದು ಗುರುತಿಸಲಾಗಿತ್ತು. ಈ ಹೆಚ್ಚುವರಿ ಭೂಮಿಯನ್ನು ಬಿಡಿಎಗೆ ನಿರ್ದೇಶಿಸಬೇಕು ಮತ್ತು ಈ ಪ್ರದೇಶದಲ್ಲಿ ಯಾವುದೇ ಕಾಮಗಾರಿ ನಡೆಸದಂತೆ ಬಿಬಿಎಂಪಿಗೆ ನಿರ್ದೇಶಿಸಬೇಕೆಂದು ಅರ್ಜಿದಾರರು ಕೋರಿದ್ದರು. ಸರಕಾರ ಈ ಜಾಗದಲ್ಲಿ ಇಂದಿರಾ ಕ್ಯಾಂಟೇನ್ ನಿರ್ಮಿಸಲು ಮುಂದಾಗಿದೆ. ತಡೆ ಗೋಡೆಯನ್ನು ಬಿಬಿಎಂಪಿ ಜೆಸಿಬಿಯಿಂದ ತೆರವುಗೊಳಿಸಿದೆ. ಬಹಳಷ್ಟು ಮರಗಳನ್ನೂ ಕಡಿದು ಹಾಕಲಾಗಿದೆ ಎಂದು ಆರೋಪಿಸಿದ್ದರು.