ಕೇಂದ್ರದ ತಪ್ಪು ಆರ್ಥಿಕ ನೀತಿಗಳಿಂದ ಉದ್ಯೋಗ ನಷ್ಟ: ಡಾ.ಪ್ರಕಾಶ್
ಉಡುಪಿ ಜಿಲ್ಲಾ ಸಿಐಟಿಯು ಆರನೇ ಸಮ್ಮೇಳನ ಉದ್ಘಾಟನೆ

ಕುಂದಾಪುರ, ಸೆ. 8: ಕೇಂದ್ರ ಸರಕಾರದ ತಪ್ಪು ಆರ್ಥಿಕ ನೀತಿಗಳಿಂದ ಉದ್ಯೋಗ ನಷ್ಟವಾಗುತ್ತಿದೆ. ಕಳೆದ 45ವರ್ಷಗಳಲ್ಲಿ ಕಾಣದಷ್ಟು ನಿರುದ್ಯೋಗ ಸಮಸ್ಯೆ ಹೆಚ್ಚಳವಾಗಿದೆ. ಜಿಎಸ್‌ಟಿ ಪರಿಣಾಮವಾಗಿ ದೇಶದ ಸುಮಾರು ಮೂರು ಲಕ್ಷಕ್ಕೂ ಅಧಿಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮುಚ್ಚಿವೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಡಾ.ಕೆ.ಪ್ರಕಾಶ್ ಆರೋಪಿಸಿದ್ದಾರೆ.
ಉಡುಪಿ ಜಿಲ್ಲಾ ಸಿಐಟಿಯು ವತಿಯಿಂದ ಕುಂದಾಪುರದ ಹೆಂಚು ಕಾರ್ಮಿಕರ ಭವನದಲ್ಲಿ ಆಯೋಜಿಸಲಾದ ಎರಡು ದಿನಗಳ ಉಡುಪಿ ಜಿಲ್ಲಾ ಸಿಐಟಿಯು ಆರನೇ ಸಮ್ಮೇಳನವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮೋದಿ ಸರಕಾರವು ಸುಳ್ಳು ದಾಖಲೆಗಳನ್ನು ಜನರ ಮುಂದಿಟ್ಟು ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂಬ ಭ್ರಮೆಯನ್ನು ಸೃಷ್ಟಿ ಮಾಡುತ್ತಿದೆ. ಈ ಮೂಲಕ ವಾಸ್ತವ ಸಂಗತಿಗಳನ್ನು ಮರೆ ಮಾಚಲಾಗುತ್ತಿದೆ. ಆಟೋಮೊಬೈಲ್, ಜವಳಿ ಉದ್ದಿಮೆಗಳಲ್ಲಿ ಹೂಡಿಕೆ ಪ್ರಮಾಣ ಗಣನೀಯವಾಗಿ ಕುಸಿಯುತ್ತಿದೆ ಎಂದು ಅವರು ದೂರಿದರು.
ಕೇಂದ್ರದ ನೋಟು ರದ್ದತಿ, ಜಿಎಸ್‌ಟಿ, ಕಾರ್ಮಿಕ ವಿರೋಧಿ ಕಾಯ್ದೆಗಳ ಪರಿಣಾಮ ಜಗತ್ತಿನ ಆರ್ಥಕತೆಯಲ್ಲಿ 5ನೇ ಸ್ಥಾನದಲ್ಲಿದ್ದ ಭಾರತ ಈಗ 7ನೇ ಸ್ಥಾನಕ್ಕೆ ಕುಸಿದಿದೆ. ದೇಶದಲ್ಲಿ 500ರೂ. ಮುಖಬೆಲೆಯ ಖೋಟಾ ನೋಟು ಗಳು ಶೇ.121ರಷ್ಟು ಚಲಾವಣೆಯಲ್ಲಿದೆ ಎಂದು ಆರ್ಬಿಐ ಅಂಕಿಅಂಶ ಹೇಳುತ್ತಿವೆ ಎಂದರು.
2017ರಲ್ಲಿ ಕೇಂದ್ರ ಸರಕಾರ 2025ರ ಆರ್ಥಿಕ ಅಭಿವೃದ್ಧಿಯ ಭರವಸೆ ಯನ್ನು ನೀಡಿತ್ತು. ಅದರಂತೆ ಪ್ರಸ್ತುತ ದೇಶದ ಆರ್ಥಿಕತೆ ಶೇ.12ರಷ್ಟು ಬೆಳವಣಿಗೆ ಕಾಣಬೇಕಾಗಿತ್ತು. ಆದರೆ ಇಂದು ಆರ್ಥಿಕತೆಯು ಶೇ.8ರಿಂದ ಶೇ.5ಕ್ಕೆ ಕುಸಿತ ಕಂಡಿದೆ. ರಿಯಲ್ ಎಸ್ಟೇಟ್ ಕ್ಷೇತ್ರ ಸ್ಥಗಿತದಿಂದ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಉದ್ಯೋಗಗಳು ಕುಂಠಿತಗೊಂಡಿವೆ. ಶೇ.4ರಷ್ಟು ಕೊಡುಗೆ ನೀಡುತ್ತಿದ್ದ ನಿರ್ಮಾಣ ಕ್ಷೇತ್ರವು ಇದೀಗ ಶೇ.2ಕ್ಕೆ ಕುಸಿದಿದೆ. ನಿಜವಾದ ಅಂಕಿ ಅಂಶಗಳನ್ನು ಕೇಂದ್ರ ಸರಕಾರ ಮುಚ್ಚಿುತ್ತಿವೆ ಎಂದು ಅವರು ಟೀಕಿಸಿದರು.
ಸಿಐಟಿಯು ಕನಿಷ್ಠ ಕೂಲಿ 20ಸಾವಿರ ರೂ. ನೀಡುವಂತೆ ನಿರಂತರ ಹೋರಾಟ ಮಾಡುತ್ತಿದೆ. ಸುಪ್ರೀಂ ಕೋರ್ಟ್ 1992ರಲ್ಲಿ ಕನಿಷ್ಠ ವೇತನ ಜಾರಿ ಮಾಡುವಂತೆ ಆದೇಶ ಮಾಡಿದೆ. ಆದರೆ ಕೇಂದ್ರ ಸರಕಾರ ಇದನ್ನು ತಿರಸ್ಕರಿಸಿ, ಕೇವಲ 4752ರೂ. ಕನಿಷ್ಠ ವೇತನ ನಿಗದಿ ಮಾಡಿರುವುದು ಕಾರ್ಮಿಕರಿಗೆ ಎಸಗಿರುವ ದ್ರೋಹ ಆಗಿದೆ. ಕಾರ್ಮಿಕರ ಕಾಯಿದೆಯನ್ನು ಮಾಲಕರ ಪರವಾಗಿ ತಿದ್ದುಪಡಿ ಮಾಡಲಾಗುತ್ತಿದ್ದು, ಇದರಿಂದ ಕಾರ್ಮಿಕರು ಮುಂದೆ ಅಪಾಯ ಕಾರಿ ದಿನಗಳನ್ನು ಕಾಣಬೇಕಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ರಾಷ್ಟ್ರ ಭಾಷೆಗಳ ಬಗ್ಗೆ ಬಿಜೆಪಿ ಅಪಪ್ರಚಾರ ಮಾಡುತ್ತಿವೆ. ಕನ್ನಡ ಸೇರಿದಂತೆ ಭಾರತದಲ್ಲಿ ಒಟ್ಟು 22 ರಾಷ್ಟ್ರಭಾಷೆಗಳಿವೆ. ಆದುದರಿಂದ ನಾವೆಲ್ಲರು ಕನ್ನಡ ವನ್ನು ರಾಷ್ಟ್ರ ಭಾಷೆಯಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ಭಾರತದಲ್ಲಿ ಏಕರಾಷ್ಟ್ರ ಭಾಷೆ ಎಂಬುದಿಲ್ಲ ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಸಿಐಟಿಯು ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ವಿಶ್ವನಾಥ ರೈ ವಹಿಸಿದ್ದರು. ವಿಮಾ ನೌಕರರ ಸಂಘದ ಅಧ್ಯಕ್ಷ ವಿಶ್ವನಾಥ ಮಾತನಾಡಿದರು. ಜಿಲ್ಲಾ ಸಿಐಟಿಯು ಪ್ರಧಾನ ಕಾರ್ಯದರ್ಶಿ ಕೆ.ಶಂಕರ್, ರಾಜ್ಯ ಸಿಐಟಿಯು ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಹಿರಿಯ ಮುಖಂಡ ಶಶಿಧರ ಗೊಲ್ಲ, ಯು. ದಾಸ ಭಂಡಾರಿ, ವಿ.ನರಸಿಂಹ ಮೊದಲಾದವರು ಉಪಸ್ಥಿತರಿದ್ದರು.
ಸ್ವಾಗತ ಸಮಿತಿಯ ಅಧ್ಯಕ್ಷ ಎಚ್.ನರಸಿಂಹ ಸ್ವಾಗತಿಸಿದರು. ಕಾರ್ಯದರ್ಶಿ ಸುರೇಶ್ ಕಲ್ಲಾಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ವೆಂಕಟೇಶ್ ಕೋಣಿ ವಂದಿಸಿದರು. ಇದಕ್ಕೂ ಮುನ್ನಾ ಧ್ವಜಾರೋಹಣವನ್ನು ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ವಿಶ್ವನಾಥ ರೈ ನೆರವೇರಿಸಿದರು.







