ಮಂಗಳೂರು: ಮೇರಿಮಾತೆ ಜನ್ಮದಿನ, ಸಂಭ್ರಮದ ಮೊಂತಿ ಹಬ್ಬ ಆಚರಣೆ

ಮಂಗಳೂರು, ಸೆ.8: ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯಾದ್ಯಂತ ರವಿವಾರ ಕ್ರೈಸ್ತರು ಮೊಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಮಂಗಳೂರಿನ ರೊಸಾರಿಯೋ ಕೆಥೆಡ್ರಲ್‌ನಲ್ಲಿ ಮಂಗಳೂರು ಧರ್ಮಪ್ರಾಂತದ ಪ್ರಧಾನ ಧರ್ಮಗುರು ಫಾ.ಮ್ಯಾಕ್ಸಿಂ ನೊರೊನ್ನಾ ಅವರು ಬಲಿಪೂಜೆ ನೆರವೇರಿಸಿದರು. ಕೆಥಡ್ರಲ್‌ನ ಧರ್ಮಗುರು ಫಾ ಜೆ.ಬಿ.ಕ್ರಾಸ್ತಾ ಅವರು ಉಪಸ್ಥಿತರಿದ್ದರು.
ಯೇಸುಕ್ರಿಸ್ತರ ತಾಯಿ ಮೇರಿಮಾತೆಯ ಜನ್ಮದಿನವನ್ನು ಸೆ.8ರಂದು ಆಚರಿಸಲಾಗುತ್ತಿದೆ. ಮೇರಿ ಮಾತೆ ದೇವಮಾತೆ ಆಗಿದ್ದು ಪವಾಡಗಳನ್ನು ಸೃಷ್ಟಿಸುತ್ತಾರೆ ಎನ್ನುವುದು ಕೆಥೋಲಿಕರ ನಂಬಿಕೆ. ಕೈಸ್ತರು ಬಾಲೆ ಮೇರಿಗೆ ನಮಿಸುವುದರ ಜತೆಗೆ ಹೊಸ ಬೆಳೆಯ ಹಬ್ಬವನ್ನು ಆಚರಿಸಿದರು.
ಹೊಸ ತೆನೆಯನ್ನು ಮನೆ ತುಂಬಿಸಿ ಈ ಹಬ್ಬವನ್ನು ವಿಜೃಂಭಣೆಯಿಂದ ಬರಮಾಡಿಕೊಳ್ಳಲಾಗುತ್ತದೆ. ಪ್ರಕೃತಿಮಾತೆಯನ್ನು ದೇವಮಾತೆಯನ್ನಾಗಿ ಈ ಹಬ್ಬದ ದಿನ ಕಾಣಲಾಗುತ್ತದೆ.
ಮೊಂತಿ ಹಬ್ಬ ಬಂತೆಂದರೆ ಕ್ರಿಶ್ಚಿಯನ್ ಸಮುದಾಯದ ಪಾಲಿಗೆ ಸಂಭ್ರಮದ ದಿನ. ಈ ಹಬ್ಬಕ್ಕೆ ಅದರದ್ದೇ ಆದ ವಿಶೇಷತೆ ಇದೆ. ಮೊಂತಿ ಹಬ್ಬದ ದಿನ ಚರ್ಚುಗಳಲ್ಲಿ ದಿವ್ಯ ಬಲಿಪೂಜೆಯನ್ನು ಭಕ್ತಿಯಿಂದ ನಡೆಸಿ, ಮಾತೆ ಮರಿಯಮ್ಮನಿಗೆ ವಿಜೃಂಭಣೆಯಿಂದ ಪುಷ್ಪ ಅರ್ಪಿಸಲಾಗುತ್ತದೆ. ಸಾಮಾನ್ಯವಾಗಿ ಒಂಭತ್ತು ದಿನಗಳ ಕಾಲ ಈ ಹಬ್ಬದ ಆಚರಣೆ ಇರುತ್ತದೆ. ಹಬ್ಬದ ಒಂಭತ್ತು ದಿನಗಳ ಮೊದಲು ಕ್ರಿಶ್ಚಿಯನ್ ಸಮುದಾಯದವರು ಚರ್ಚ್‌ಗಳಿಗೆ ತೆರಳಿ ಮಾತೆ ಮರಿಯಮ್ಮನವರಿಗೆ ಪುಷ್ಪಾರ್ಚಣೆ ಮಾಡಿ ಭಕ್ತಿಯಿಂದ ಆರಾಧನೆ ಮಾಡುತ್ತಾರೆ.
ಹಬ್ಬದ ಕೊನೆಯ ದಿನವಾದ ಮಾತೆಯ ಜನ್ಮದಿನದಂದು ಹೊಸ ಭತ್ತದ ತೆನೆಯನ್ನು ಚರ್ಚ್‌ಗಳಲ್ಲಿ ನೀಡಲಾಗುತ್ತದೆ. ಕುಟುಂಬದ ಎಲ್ಲ ಸದಸ್ಯರು ಒಟ್ಟಿಗೆ ಹೊಸ ಅಕ್ಕಿ ಊಟ ಮಾಡುವ ಮೂಲಕ ಹಬ್ಬದ ಸವಿಯುಣ್ಣುತ್ತಾರೆ. ಪೃಕೃತಿಮಾತೆಯು ನೀಡಿದ ಮೊದಲ ಫಲವನ್ನು ಕುಟುಂಬದ ಸದಸ್ಯರೆಲ್ಲರೂ ಜೊತೆಯಾಗಿ ಸೇವಿಸುವುದು ಈ ಹಬ್ಬದ ವಿಶೇಷವಾಗಿದೆ.














