ಅಭಿವೃದ್ಧಿ, ದೊಡ್ಡ ಬದಲಾವಣೆಗಳ 100 ದಿನ: ಪ್ರಧಾನಿ ಮೋದಿ
ಮೋದಿ ಸರಕಾರಕ್ಕೆ 100 ದಿನ

ಹೊಸದಿಲ್ಲಿ,ಸೆ.8: ಕೇಂದ್ರ ಎನ್‌ಡಿಎ ಮೈತ್ರಿಕೂಟದ ಮೋದಿ ಸರಕಾರ ರವಿವಾರ ನೂರು ದಿನಗಳನ್ನು ಪೂರೈಸಿದ್ದು ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಜನರ ಅಭೂತಪೂರ್ವ ಬೆಂಬಲದಿಂದ ಅಧಿಕಾರಕ್ಕೆ ಮರಳಿದ ತನ್ನ ಸರಕಾರ ನೂರು ದಿನಗಳನ್ನು ಅಭಿವೃದ್ಧಿ ಮತ್ತು ದೊಡ್ಡ ಬದಲಾವಣೆಗಳ ಜೊತೆ ಆಚರಿಸುತ್ತಿದೆ. ಇದನ್ನು ಜನರ ನಂಬಿಕೆ ಮತ್ತು ಬೆಂಬಲದಿಂದ ಸಾಧಿಸಲಾಗಿದೆ ಎಂದು ತಿಳಿಸಿದ್ದಾರೆ. ಕಳೆದ ನೂರು ದಿನಗಳಲ್ಲಿ ತೆಗೆದುಕೊಂಡಿರುವ ಎಲ್ಲ ದೊಡ್ಡ ನಿರ್ಧಾರಗಳ ಹಿಂದೆ ದೇಶದ 130 ಕೋಟಿ ಜನರ ಸ್ಫೂರ್ತಿ ಅಡಗಿದೆ ಎಂದು ಅವರು ತಿಳಿಸಿದ್ದಾರೆ. ಮುಂದಿನ ಎರಡು ದಿನಗಳ ಕಾಲ ಸರಕಾರದ ಸಚಿವರು ತಮ್ಮ ಸಚಿವಾಲಯಗಳ ಸಾಧನೆಗಳ ಪ್ರಾತ್ಯಕ್ಷಿಕೆ ನೀಡುವ ನಿರೀಕ್ಷೆಯಿದೆ. ಕಳೆದ ವರ್ಷವೂ ಕೇಂದ್ರ ಸಚಿವರು ಈ ಪ್ರಕ್ರಿಯೆಯನ್ನು ನಡೆಸಿದ್ದರು. ಇದಕ್ಕೆ ಇಂದು ಆರಂಭ ನೀಡಿದ ಪ್ರಧಾನಿ ಮೋದಿ ಸಂಸತ್‌ನ ಮೊದಲ ಅಧಿವೇಶನದಲ್ಲಿ ನಡೆದ ಕಾರ್ಯಗಳ ಮೇಲೆ ಬೆಳಕು ಚೆಲ್ಲಿದರು.
ಅನೇಕ ಮಸೂದೆಗಳನ್ನು ಜಾರಿಗೆ ತರಲಾಯಿತು ಮತ್ತು ಈ ಅಧಿವೇಶನದಲ್ಲಿ ಮಾಡಿದಷ್ಟು ಕೆಲಸ ಕಳೆದ 60 ವರ್ಷಗಳಲ್ಲಿ ಯಾವುದೇ ಸಂಸತ್ ಅಧಿವೇಶನದಲ್ಲಿ ಮಾಡಲಾಗಿಲ್ಲ ಎಂದು ಹರ್ಯಾಣದ ರೊಹ್ಟಕ್‌ನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡುವ ವೇಳೆ ಅವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೆಕರ್, ಮೋದಿ 2.0 ಸರಕಾರ ತನ್ನ ಮೊದಲ 100 ದಿನಗಳಲ್ಲಿ ಐತಿಹಾಸಿಕ ಮತ್ತು ಗಮನಾರ್ಹ ನಿರ್ಧಾರಗಳನ್ನು ಅಷ್ಟೇ ವೇಗದಿಂದ ತೆಗೆದುಕೊಂಡಿದೆ. 2025ರ ಹೊತ್ತಿಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಮಹತ್ವಾಕಾಂಕ್ಷೆ ಸರಕಾರಕ್ಕೆ ದಿಕ್ಸೂಚಿಯನ್ನು ನೀಡಿದೆ. ಅದರ ರೂಪುರೇಷೆ ಬಡವರು ಮತ್ತು ರೈತರನ್ನು ಸಬಲಗೊಳಿಸುವುದು. ಆರು ಕೋಟಿ ಕಾರ್ಮಿಕರು ಮತ್ತು 14 ಕೋಟಿ ರೈತರು ಪಿಂಚಣಿ ಮತ್ತು ನೇರ ಲಾಭ ವರ್ಗಾವಣೆ ಯೋಜನೆಗಳ ಲಾಭಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.







