ವಂಚೊ ಭಾಷೆ ಸಂರಕ್ಷಣೆಗೆ ಹೊಸ ಬುಡಕಟ್ಟು ಲಿಪಿ ಅಭಿವೃದ್ಧಿಪಡಿಸಿದ ವಿದ್ಯಾರ್ಥಿ

ಪುಣೆ,ಸೆ.8: ಈಶಾನ್ಯ ಭಾಗದ ಹಲವು ರಾಜ್ಯಗಳಲ್ಲಿ ಮಾತನಾಡುವ ವಂಚೊ ಭಾಷೆಯನ್ನು ಸಂರಕ್ಷಿಸುವ ಪ್ರಯತ್ನವಾಗಿ ಅರುಣಾಚಲ ಪ್ರದೇಶದ ಭಾಷಾ ವಿದ್ಯಾರ್ಥಿ ಬನ್ವಂಗ್ ಲೊಸು ಅವರು ಸ್ವತಂತ್ರ ವಂಚೊ ಲಿಪಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಅರುಣಾಚಲ ಪ್ರದೇಶದ ಬುಡಕಟ್ಟು ಜನಾಂಗಗಳಲ್ಲಿ ಒಂದಾಗಿರುವ ವಂಚೊ ಸಮುದಾಯಕ್ಕೆ ಯಾವುದೇ ಲಿಪಿಯಿಲ್ಲ. ತಾನು ಅಭಿವೃದ್ಧಿಪಡಿಸಿದ ಲಿಪಿಯನ್ನು ಆನ್ಲೈನ್ನಲ್ಲಿ ಬಳಕೆ ಮಾಡಲು ಸಾಧ್ಯವಾಗಲು ಲೊಸು ಅದನ್ನು ಅಮೆರಿಕ ಮೂಲದ ಯೂನಿಕೋಡ್ ಒಕ್ಕೂಟದಲ್ಲೂ ದಾಖಲಿಸಿದ್ದಾರೆ. ಹಾಗಾಗಿ ಈ ಲಿಪಿಯನ್ನು ಜಗತ್ತಿನಾದ್ಯಂತ ಅಂತರ್ಜಾಲದ ಮೂಲಕ ಬಳಸಬಹುದಾಗಿದೆ. ಈ ಕುರಿತು ಮಾತನಾಡಿದ ಲೊಸು, ವಂಚೊ ಭಾಷೆಯನ್ನು ಅಭಿವೃದ್ಧಿಪಡಿಸಲು 12 ವರ್ಷಗಳು ಬೇಕಾದವು. ಈ ಭಾಷೆ ಕೇವಲ ಅರುಣಾಚಲ ಪ್ರದೇಶಕ್ಕಷ್ಟೇ ಸೀಮಿತವಲ್ಲ ನಾಗಲ್ಯಾಂಡ್, ಅಸ್ಸಾಂ ಮತ್ತು ಇತರ ದೇಶಗಳಾದ ಮ್ಯಾನ್ಮಾರ್ ಮತ್ತು ಭೂತಾನ್ನಲ್ಲಿಯೂ ಮಾತನಾಡುತ್ತಾರೆ ಎಂದು ತಿಳಿಸಿದ್ದಾರೆ. 2013ರಲ್ಲಿ ಬಿಡುಗಡೆಯಾದ ವಂಚೊ ಲಿಪಿ ಎಂಬ ಪುಸ್ತಕದಲ್ಲಿ ಮೂಲ ಅಕ್ಷರಗಳನ್ನು ಬಳಸಿ ರೂಪಿಸಲಾದ ಶಬ್ದಗಳು ಮತ್ತು ವಾಕ್ಯಗಳನ್ನು ನೀಡಲಾಗಿತ್ತು. ಈ ಪುಸ್ತಕವನ್ನು ಸದ್ಯ 20 ಸರಕಾರಿ ಶಾಲೆಗಳ ಪಠ್ಯಪುಸ್ತಕವಾಗಿ ಭಾಷೆಯನ್ನು ಕಲಿಸಲು ಬಳಸಲಾಗುತ್ತಿದೆ.