ಅಸ್ಸಾಂ:ಅಫ್‌ಸ್ಪಾ ಇನ್ನೂ ಆರು ತಿಂಗಳಿಗೆ ವಿಸ್ತರಣೆ

ಗುವಾಹಟಿ,ಸೆ.8: ಅಸ್ಸಾಂ ಸರಕಾರವು ರಾಜ್ಯದಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (ಅಫ್‌ಸ್ಪಾ)ಯನ್ನು ಶನಿವಾರ ಇನ್ನೂ ಆರು ತಿಂಗಳ ಅವಧಿಗೆ ವಿಸ್ತರಿಸಿದೆ. ವಿಸ್ತರಣೆಯು ಆ.28ರಿಂದಲೇ ಜಾರಿಗೊಂಡಿದೆ.
ಕಾಯ್ದೆಯು ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಅಗತ್ಯವಾದರೆ ಶೋಧ ಕಾರ್ಯಾಚರಣೆ ಮತ್ತು ಬಂಧನಗಳನ್ನು ನಡೆಸಲು ಹಾಗೂ ಗುಂಡು ಹಾರಿಸಲು ವ್ಯಾಪಕ ಅಧಿಕಾರವನ್ನು ಸೇನೆಗೆ ನೀಡಿದೆ ಮತ್ತು ಇದಕ್ಕಾಗಿ ಸೇನೆಯ ವಿರುದ್ಧ ಕಾನೂನುಕ್ರಮಗಳಿಂದ ವಿನಾಯಿತಿಯನ್ನು ನೀಡಲಾಗಿದೆ.
ಕೇಂದ್ರ ಸರಕಾರವು ರಾಜ್ಯದಲ್ಲಿ ಅಫ್‌ಸ್ಪಾವನ್ನು 1990ರಲ್ಲಿ ಮೊದಲ ಬಾರಿಗೆ ಹೇರಿತ್ತು. 2017ರಲ್ಲಿ ಈ ಅಧಿಕಾರವನ್ನು ರಾಜ್ಯಕ್ಕೆ ನೀಡಿದ್ದ ಕೇಂದ್ರವು ಕಾಯ್ದೆಯು ಮುಂದುವರಿಯಬೇಕೇ ಎನ್ನುವುದನ್ನು ನಿರ್ಧರಿಸುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿತ್ತು.
ಅಸ್ಸಾಮಿನಲ್ಲಿ ಆಗಸ್ಟ್‌ನಲ್ಲಿ ಅಫ್‌ಸ್ಪಾವನ್ನು ಹಿಂದೆಗೆದುಕೊಳ್ಳುವ ಸಾಧ್ಯತೆಯಿದೆ ಮತ್ತು ರಾಜ್ಯದಿಂದ ವಾಪಸಾಗುವಂತೆ ಕೇಂದ್ರವು ಭಾರತೀಯ ಸೇನೆಗೆ ಸೂಚಿಸಿದೆ ಎಂದು ಮಾಧ್ಯಮಗಳು ಕಳೆದ ಎಪ್ರಿಲ್‌ನಲ್ಲಿ ವರದಿ ಮಾಡಿದ್ದವು. ರಾಜ್ಯ ಸರಕಾರವು ಈ ಹಿಂದೆ ಎನ್‌ಆರ್‌ಸಿ ಪರಿಷ್ಕರಣೆಯನ್ನು ಉಲ್ಲೇಖಿಸಿ ಎರಡು ಬಾರಿ ಕಾಯ್ದೆಯ ಅವಧಿಯನ್ನು ವಿಸ್ತರಿಸಿತ್ತು. ಅಂತಿಮ ಎನ್‌ಆರ್‌ಸಿ ಆ.31ರಂದು ಪ್ರಕಟಗೊಂಡಿತ್ತು.





