ಅತಿವೃಷ್ಟಿ ಹಾನಿ: ಕೊಡಗಿಗೆ 2 ಸಾವಿರ ಕೋಟಿ ರೂ.ಗೂ ಅಧಿಕ ನಷ್ಟ
16 ಮಂದಿ ಮೃತ, ನಾಲ್ವರು ನಾಪತ್ತೆ

ಮಡಿಕೇರಿ, ಸೆ.8: ಪ್ರಸಕ್ತ ವರ್ಷ ಸಂಭವಿಸಿದ ಅತಿವೃಷ್ಟಿ ಹಾನಿಯಿಂದ ಕೊಡಗು ಜಿಲ್ಲೆಗೆ 2 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ನಷ್ಟವಾಗಿದೆ. ಭೂಕುಸಿತ, ಕೃಷಿ, ತೋಟಗಾರಿಕೆ, ಮನೆ, ಸೊತ್ತುಗಳ ನಾಶ, ಜಾನುವಾರುಗಳ ಬಲಿ, ಮಾನವ ಜೀವಹಾನಿ, ಮರ ಉರುಳಿ ಬಿದ್ದಿರುವುದು, ರಸ್ತೆ ಮತ್ತು ಹೆದ್ದಾರಿ ಹಾನಿ ಪ್ರಕರಣಗಳು ಸೇರಿದಂತೆ ವಿವಿಧ ಮೂಲಗಳಿಂದ ಸರಕಾರದ ಬಹುತೇಕ ಎಲ್ಲಾ ಇಲಾಖೆಗಳಿಗೂ ಕೋಟಿ, ಕೋಟಿ ನಷ್ಟವಾಗಿದೆ.
ಪ್ರಸಕ್ತ ವರ್ಷದ ಪ್ರಾಕೃತಿಕ ವಿಕೋಪದಲ್ಲಿ ಒಟ್ಟು 16 ಮಂದಿ ಮೃತಪಟ್ಟಿದ್ದರೆ, 4 ಮಂದಿ ನಾಪತ್ತೆಯಾಗಿದ್ದಾರೆ. ಮೃತಪಟ್ಟ ಕುಟುಂಬಗಳ ಸದಸ್ಯರಿಗೆ ತಲಾ 5 ಲಕ್ಷದಂತೆ ಒಟ್ಟು 65 ಲಕ್ಷ ರೂ.ಗಳ ಪರಿಹಾರವನ್ನು ವಿತರಿಸಲಾಗಿದ್ದು, 3 ಪ್ರಕರಣಗಳಿಗೆ ಸಂಬಂಧಿಸಿದಂತೆ ವಾರಸುದಾರರ ಬಗ್ಗೆ ಗೊಂದಲ ಇರುವ ಹಿನ್ನಲೆಯಲ್ಲಿ ಪರಿಹಾರವನ್ನು ತಡೆಹಿಡಿಯಲಾಗಿದೆ. ಈ ನಡುವೆ ವಿರಾಜಪೇಟೆ ತಾಲೂಕಿನ ತೋರಾ ಗ್ರಾಮದಲ್ಲಿ ಮಣಿಪಾರೆ ಬೆಟ್ಟ ಕುಸಿದು ನಾಪತ್ತೆಯಾದವರ ಶೋಧ ಕಾರ್ಯವನ್ನು ಆಗಸ್ಟ್ 9ರಿಂದ ಆ.31ರ ವರೆಗೆ ನಡೆಸಲಾಗಿದ್ದು ಅವರ ಯಾವ ಸುಳಿವು ಲಭಿಸಿಲ್ಲ. ಈ ಹಿನ್ನಲೆಯಲ್ಲಿ ನಾಪತ್ತೆಯಾದವರು ಮೃತಪಟ್ಟಿದ್ದಾರೆ ಎಂದು ಘೋಷಿಸಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 5 ಲಕ್ಷ ರೂ.ಗಳನ್ನು ನೀಡುವಂತೆ ಜಿಲ್ಲಾಡಳಿತದಿಂದ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
2068 ಮನೆಗಳಿಗೆ ಹಾನಿ
ಅತೀವ ಮಳೆ, ಜಲ ಪ್ರವಾಹ, ಮರ ಬಿದ್ದಿರುವುದು, ಭೂ ಕುಸಿತ ಮತ್ತಿತರ ಕಾರಣಗಳಿಂದ ಜಿಲ್ಲೆಯಲ್ಲಿ ಒಟ್ಟು 2068 ಮನೆಗಳಿಗೆ ಹಾನಿ ಸಂಭವಿಸಿದೆ. ಈ ಪೈಕಿ 3 ತಾಲೂಕಿನಲ್ಲಿ 363 ಮನೆಗಳಿಗೆ ತೀವ್ರ ಹಾನಿಯಾಗಿದ್ದರೆ, 643 ಮನೆಗಳಿಗೆ ಶೇ.25ರಿಂದ 75ರಷ್ಟು ಹಾನಿಯಾಗಿದೆ. 1032 ಮನೆಗಳಿಗೆ ಭಾಗಶಃ ಮತ್ತು 30 ಗುಡಿಸಲುಗಳಿಗೂ ಹಾನಿ ಸಂಭವಿಸಿದೆ. 1032 ಮನೆ ಹಾನಿ ಪ್ರಕರಣಕ್ಕೆ ತಲಾ 25 ಸಾವಿರದಂತೆ ಒಟ್ಟು 2.58 ಕೋಟಿ ರೂ.ಪರಿಹಾರ ವಿತರಣೆ ಮಾಡಲಾಗಿದ್ದರೆ, 30 ಗುಡಿಸಲಿಗೆ ತಲಾ 4100ರೂ.ಗಳಂತೆ ಒಟ್ಟು 1.23 ಲಕ್ಷ.ರೂ. ಪರಿಹಾರ ನೀಡಲಾಗಿದೆ. ಇನ್ನುಳಿದ 643 ಮನೆಗಳಿಗೆ ತಲಾ 1 ಲಕ್ಷದಂತೆ ಮತ್ತು 363 ಮನೆಗಳಿಗೆ ತಲಾ 5 ಲಕ್ಷದಂತೆ ಪರಿಹಾರ ವಿತರಿಸಲು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಜವಾಬ್ದಾರಿ ವಹಿಸಲಾಗಿದೆ. ಈ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಮಾತ್ರವಲ್ಲದೇ 5 ಲಕ್ಷ ಪರಿಹಾರ ಪಡೆಯಲು ಅರ್ಹವಾಗಿರುವ ಕುಟುಂಬಗಳಿಗೆ ಕನಿಷ್ಟ 10 ತಿಂಗಳ ಅವಧಿಗೆ ಮಾಸಿಕ 5 ಸಾವಿರ ರೂ. ಬಾಡಿಗೆ ಪಾವತಿಸಲು ಕೂಡ ಕ್ರಮ ಕೈಗೊಳ್ಳಲಾಗುತ್ತಿದೆ.
ಪ್ರಾಕೃತಿಕ ವಿಕೋಪದಲ್ಲಿ 3 ತಾಲೂಕಿನ 11 ಹೋಬಳಿಗಳ, 54 ಗ್ರಾಮಗಳ ಒಟ್ಟು 119 ಸ್ಥಳಗಳು ತೀವ್ರ ಹಾನಿಗೊಳಗಾಗಿವೆ. ಈ ಪ್ರದೇಶಗಳಲ್ಲಿ ನೆಲೆಸಿದ್ದ 8211 ಮಂದಿ ಸಂತ್ರಸ್ತರಾಗಿದ್ದು, ಒಟ್ಟು 50 ಪರಿಹಾರ ಕೇಂದ್ರಗಳನ್ನು ತೆರೆಯುವ ಮೂಲಕ ಅವರಿಗೆ ಆಶ್ರಯ ಒದಗಿಸಲಾಗಿತ್ತು. ಪ್ರಸಕ್ತ ಮಳೆ ಇಳಿಕೆಯಾದ ಹಿನ್ನಲೆಯಲ್ಲಿ ನೆಲ್ಲಿಹುದಿಕೇರಿ ಮತ್ತು ಕರಡಿಗೋಡುವಿನಲ್ಲಿ ಮಾತ್ರವೇ ಪರಿಹಾರ ಕೇಂದ್ರಗಳು ಕಾರ್ಯಾಚರಿಸುತ್ತಿದ್ದು, ಒಟ್ಟು 212 ಮಂದಿ ಆಶ್ರಯ ಪಡೆದಿದ್ದಾರೆ. ಪುನರ್ವಸತಿ ಕೇಂದ್ರಗಳಿಂದ ಮನೆಗೆ ಮರಳಿದ 4148 ನಿರಾಶ್ರಿತ ಕುಟುಂಬಕ್ಕೆ ದಿನಸಿ ವಸ್ತುಗಳು, ಔಷಧಿ ಮತ್ತು ತಲಾ 10 ಸಾವಿರ ರೂ.ಗಳನ್ನು ಬಟ್ಟೆ ಹಾಗೂ ದಿನ ಬಳಕೆ ವಸ್ತುಗಳ ಪರಿಹಾರಕ್ಕಾಗಿ ಒಟ್ಟು 4.15 ಕೋಟಿ ರೂ.ಗಳನ್ನು ಪಾವತಿ ಮಾಡಲಾಗಿದೆ. ಜಿಲ್ಲೆಯಲ್ಲಿ ಮಳೆ, ಜಲ ಪ್ರವಾಹ, ಭೂ ಕುಸಿತಕ್ಕೆ ಸಿಲುಕಿ 76 ವಿವಿಧ ಜಾನುವಾರುಗಳು ಕೂಡ ಪ್ರಾಣ ತೆತ್ತಿದ್ದು, 10.72 ಲಕ್ಷ ರೂ.ಗಳನ್ನು ಪರಿಹಾರ ರೂಪದಲ್ಲಿ ಪಾವತಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಕೃಷಿ ನಷ್ಟ
ಪ್ರಾಕೃತಿಕ ವಿಕೋಪ ಮತ್ತು ಅತಿಯಾದ ಮಳೆಗೆ ಸಿಲುಕಿ 1,18,975 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ನಷ್ಟ ಉಂಟಾಗಿದೆ. 266.52 ಕೋಟಿ ರೂ.ಗಳಷ್ಟು ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಹಾನಿ ಸಂಭವಿಸಿದ್ದು, ಈ ಪ್ರಮಾಣ ಮತ್ತಷ್ಟು ಏರಿಕೆಯಾಗಲಿದೆ ಎನ್ನಲಾಗುತ್ತಿದೆ. ಇಂದಿಗೂ ಜಿಲ್ಲೆಯ ವಿವಿಧ ಕಡೆಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಬೆಳೆಹಾನಿಯ ಪ್ರಮಾಣ ಹೆಚ್ಚಾಗಲಿದೆ. ಈಗಾಗಗಲೇ ತಾಲೂಕು ಕೇಂದ್ರಗಳಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಹಾನಿಯಾದ ಸಂಬಂಧ ಅರ್ಜಿ ಸ್ವೀಕರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಒಟ್ಟು ಹಾನಿಯ ಸಂಪೂರ್ಣ ಮಾಹಿತಿ ದೊರೆಯಲಿದೆ.
ಉಳಿದಂತೆ ಲೋಕೋಪಯೋಗಿ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ, ಗ್ರಾಮೀಣ ನೀರು ಸರಬರಾಜು, ಸಣ್ಣ ನೀರಾವರಿ, ಸೆಸ್ಕ್, ನಗರಾಭಿವೃದ್ಧಿ ಇಲಾಖೆ, ಪಿಎಂಜಿಎಸ್‍ವೈ, ರಾಷ್ಟ್ರೀಯ ಹೆದ್ದಾರಿಯ ರಸ್ತೆಗಳು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೃಹತ್ ನೀರಾವರಿ ಇಲಾಖೆಗಳ ಹಾನಿಯ ಮೊತ್ತವು 333.02 ಕೋಟಿ ರೂ.ಗಳನ್ನು ದಾಟಿದೆ. ವಿವಿಧ ಇಲಾಖೆಗಳಿಗೆ ತ್ವರಿತ ಪರಿಹಾರ ಕಾಮಗಾರಿಗಳನ್ನು ನಿರ್ವಹಿಸಲು ಹಣಕಾಸನ್ನು ಬಿಡುಗಡೆ ಮಾಡಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.








