ತೋರಾ ಗುಡ್ಡ ಕುಸಿದು ಒಂದು ತಿಂಗಳು: ನಾಲ್ವರು ಇನ್ನೂ ನಿಗೂಢ

ಮಡಿಕೇರಿ, ಸೆ.8: ವಿರಾಜಪೇಟೆ ತಾಲೂಕಿನ ತೋರಾ ಗ್ರಾಮದಲ್ಲಿ ಮಹಾಮಳೆಯಿಂದ ಭೂ ಕುಸಿತ ಉಂಟಾಗಿ 10 ಮಂದಿ ನಾಪತ್ತೆಯಾಗಿ ಇಲ್ಲಿಯವರೆಗೆ ಒಟ್ಟು 6 ಮಂದಿಯ ಮೃತದೇಹಗಳು ಪತ್ತೆಯಾಗಿವೆ. ಆದರೆ ಘಟನೆ ಸಂಭವಿಸಿ ಒಂದು ತಿಂಗಳೇ ಕಳೆದಿದ್ದರೂ ಉಳಿದ ನಾಲ್ವರ ಮೃತದೇಹಗಳು ಇಲ್ಲಿಯವರೆಗೆ ಪತ್ತೆಯಾಗಿಲ್ಲ. ಶೋಧ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಎರಡು ವಾರವಾಗಿದೆ.
ಆಗಸ್ಟ್ 9ರ ವರಮಹಾಲಕ್ಷ್ಮಿ ಹಬ್ಬದ ದಿನ ಬೆಳಗಿನ 10.30ರ ಸಮಯದಲ್ಲಿ ಘಟಿಸಿದ ಈ ಘೋರ ದುರಂತದಲ್ಲಿ ಹರೀಶ್ ಅವರ ಪತ್ನಿ 8 ತಿಂಗಳ ತುಂಬು ಗರ್ಭಿಣಿ ವೀಣಾ ಮತ್ತು ಪ್ರಭು ಭಟ್ ಅವರ ತಾಯಿ ಹಾಗೂ ಇಬ್ಬರು ಮಕ್ಕಳು ನಾಪತ್ತೆಯಾಗಿದ್ದರು. ಆದರೆ ಆ.22 ರವರೆಗೆ ಎಡೆಬಿಡದೇ ನಿರಂತರ ಶೋಧ ಕಾರ್ಯ ನಡೆಸಿದ್ದರೂ ನಿರೀಕ್ಷಿತ ಫಲಿತಾಂಶ ಕಂಡು ಬಂದಿಲ್ಲ.
ಭಾರೀ ಕೆಸರು ಮಣ್ಣು, ಮಣ್ಣಿನಡಿ ಹುದುಗಿರುವ ಬೃಹತ್ ಮರದ ದಿಮ್ಮಿಗಳು, ಕಲ್ಲು ಬಂಡೆಗಳು ಮಾತ್ರವಲ್ಲದೇ, ಆಳೆತ್ತರಕ್ಕೆ ತುಂಬಿರುವ ಮಣ್ಣಿನಲ್ಲಿ ಮೊಣಕಾಲಿನವರೆಗೂ ಹೂತು ಹೋಗುವ ವಿಷಮ ಪರಿಸ್ಥಿತಿ ತೋರಾದಲ್ಲಿದೆ. ಇದರ ನಡುವೆಯೂ ಆಂಧ್ರಪ್ರದೇಶದ ವೆಲ್ಲೂರಿನ 10ನೇ ಬೆಟಾಲಿಯನ್‍ನ ಎನ್.ಡಿ.ಆರ್.ಎಫ್. ಯೋಧರು ಮತ್ತು ವಿರಾಜಪೇಟೆ ಗ್ರಾಮಾಂತರ ಪೊಲೀಸರು ಭಾರೀ ಪರಿಶ್ರಮದಿಂದ ಭೂ ಕುಸಿತದಲ್ಲಿ ಸಿಲುಕಿ ಮೃತಪಟ್ಟಿದ್ದ 6 ಮಂದಿಯ ಮೃತದೇಹಗಳನ್ನು ಹೊರೆತೆಗೆಯುವಲ್ಲಿ ಯಶಸ್ವಿಯಾಗಿದ್ದರು.
ತೋರಾ ಗ್ರಾಮದಲ್ಲಿ ಮಣಿಪಾರೆ ಬೆಟ್ಟ ಕುಸಿದು ಅಂದಾಜು 1.5 ಕಿ.ಮೀ. ವ್ಯಾಪ್ತಿಯ 150 ಎಕರೆ ಪ್ರದೇಶ ಸಂಪೂರ್ಣ ಭೂ ಗರ್ಭ ಸೇರಿದ್ದು, ಅಲ್ಲಿದ 7 ಮನೆಗಳು 50ರಿಂದ 60 ಅಡಿ ಆಳದಲ್ಲಿ ಭೂ ಸಮಾಧಿಯಾಗಿವೆ. ಒಟ್ಟು 6 ಬೃಹತ್ ಹಿಟಾಚಿ ಯಂತ್ರಗಳು ಅಂದಾಜು 40 ಅಡಿ ಆಳದ ಕೆಸರು ಮಣ್ಣನ್ನು ತೆರವು ಮಾಡುತ್ತಾ ನಿರಂತರ ಶೋಧ ಕಾರ್ಯದಲ್ಲಿ ತೊಡಗಿದ್ದ ಸಂದರ್ಭ ಮನೆಯೊಳಗಿದ್ದ ಸಾಮಾಗ್ರಿಗಳು, ಮತ್ತಿತ್ತರ ವಸ್ತುಗಳುನಜ್ಜುಗುಜ್ಜಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಆದರೆ ಈ ಸ್ಥಳದಲ್ಲಿ ನಾಪತ್ತೆಯಾದ ನಾಲ್ವರ ಮೃತದೇಹಗಳು ಮಾತ್ರ ಇಂದಿಗೂ ಗೋಚರಿಸಿಲ್ಲ.
ಈ ಹಿನ್ನೆಲೆಯಲ್ಲಿ ಇದೀಗ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲು ರಕ್ಷಣಾ ತಂಡಗಳು ನಿರ್ಧರಿಸಿದೆ. ತೋರಾ ಗ್ರಾಮದ ಮಣಿಪಾರೆ ಬೆಟ್ಟ ಕುಸಿದು ಮೃತರಾದವರ ಪೈಕಿ ಮಮತ, ಲಿಖಿತ, ಅನುಸೂಯ, ಶಂಕರ, ಅಪ್ಪು, ಲೀಲಾ ಎಂಬವರ ಮೃತದೇಹಗಳು ಪತ್ತೆಯಾಗಿವೆ. ಪ್ರಭು ಎಂಬವರ ತಾಯಿ ದೇವಕ್ಕಿ(65), ಮಕ್ಕಳಾದ ಅಮೃತಾ(13), ಆದಿತ್ಯ(10), ಹರೀಶ್ ಎಂಬವರ ಪತ್ನಿ ವೀಣಾ ಎಂಬವರು ಇಂದಿಗೂ ನಾಪತ್ತೆ ಪ್ರಕರಣವೆಂದು ಪೊಲೀಸ್ ದಾಖಲೆಯಲ್ಲಿ ಉಳಿದು ಹೋಗಿದ್ದಾರೆ. ಆದರೆ ಇವರು ಕೂಡ ಭೂ ಕುಸಿತದಲ್ಲಿ ಸಿಲುಕಿ ಮೃತಪಟ್ಟಿರುವ ಎಲ್ಲಾ ಸಾಧ್ಯತೆಗಳಿವೆ. ಆದರೆ ನಾಪತ್ತೆಯಾದವರು ಮೃತಪಟ್ಟಿದ್ದಾರೆ ಎಂದು ಘೋಷಿಸಲು ಕಾನೂನಾತ್ಮಕವಾಗಿ ಸದ್ಯಕ್ಕೆ ಅಸಾಧ್ಯವಾಗಿದೆ.







