ನೇತ್ರಾಣಿ ದ್ವೀಪದ ಬಳಿ ಬೋಟ್ ದುರಂತ: 10 ಮೀನುಗಾರರ ರಕ್ಷಣೆ

ಭಟ್ಕಳ: ನೇತ್ರಾಣಿ ದ್ವೀಪದ ಬಳಿ ರವಿವಾರ ಮಂಗಳೂರಿನ ಮೀನುಗಾರಿಕ ಬೋಟೊಂದು ದುರಂತಕ್ಕೀಡಾಗಿದ್ದು ಬೋಟಿನಲ್ಲಿದ್ದ ಹತ್ತು ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.
ಅರಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಹವಾಮಾನ ವೈಫರಿತ್ಯದಿಂದಾಗಿ ಮಂಗಳೂರು ಬೇಂಗ್ರೆಯ ಬೋಟ್ ಕಾರವಾರದಲ್ಲಿ ಲಂಗರು ಹಾಕಿದ್ದು ಹವಾಮಾನ ಸರಿಹೊಂದಿದ ನಂತರ ಬೋಟ್ ಮಂಗಳೂರು ಕಡೆ ಪ್ರಯಾಣ ಬೆಳೆಸಿತ್ತು. ಈ ವೇಳೆಯಲ್ಲಿ ನೇತ್ರಾಣಿ ಬಳಿ ಬೋಟ್ ತಲುಪಿದಾಗ ಅಕಸ್ಮಿಕವಾಗಿ ದ್ವೀಪದ ಬಳಿ ನಡುಗಡ್ಡೆಯ ಕಲ್ಲಿಗೆ ಬೋಟ್ ಢಿಕ್ಕಿ ಹೊಡೆದು ಬೋಟ್ ಮುಳುಗಡೆಯಾಗಿದೆ ಬೋಟಿನಲ್ಲಿ ಇದ್ದ ತಮಿಳುನಾಡು ಮೂಲದ 10 ಮೀನುಗಾರರಿಗೆ ಇನ್ನೊಂದು ಬೋಟಿನವರ ಸಹಾಯದಿಂದ ರಕ್ಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದ್ದು ಒಂದು ಕೋಟಿ ಐದು ಲಕ್ಷ ರೂ. ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಭಟ್ಕಳ ಕೋಸ್ಟಲ್ ಸೆಕ್ಯುರಿಟಿ ಪೊಲೀಸ್ ಅಧಿಕಾರಿ ಸುರೇಶ್ ನಾಯಕ್, ದುರಂತಕ್ಕೀಡಾದ ಬೋಟ್ ಮಾಲಿಕ ಮಂಗಳೂರು ಕಸ್ಬಾ ಬೇಂಗ್ರೆಯ ಮುಹಮ್ಮದ್ ಆಸೀಫ್ ಅವರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಕುರಿತಂತೆ ಮುರುಢೇಶ್ವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.





