ತಾಲಿಬಾನ್ ಜೊತೆ ರಹಸ್ಯ ಶೃಂಗಸಭೆ ರದ್ದುಪಡಿಸಿದ ಟ್ರಂಪ್

ವಾಶಿಂಗ್ಟನ್,ಸೆ.8: ಅಫ್ಘಾನಿಸ್ತಾನದಲ್ಲಿ ಅಮೆರಿಕದ ಸುದೀರ್ಘ ಸಮರವನ್ನು ಕೊನೆಗಾಣಿಸು ಪ್ರಯತ್ನವಾಗಿ ತಾಲಿಬಾನ್ ಹಾಗೂ ಅಫ್ಘಾನ್ ಅಧ್ಯಕ್ಷರ ಜೊತೆ ತಾನು ನಡೆಲು ಉದ್ದೇಶಿಸಿದ್ದ ರಹಸ್ಯ ಶೃಂಗಸಭೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಠಾತ್ತನೆ ಸ್ಥಗಿತಗೊಳಿಸಿದ್ದಾರೆ. ಇದರೊಂದಿಗೆ ಅಫ್ಘಾನ್ ಯುದ್ಧವನ್ನು ಅಂತ್ಯಗೊಳಿಸಲು ಅಮೆರಿಕ ನಡೆಸುತ್ತಿದ್ದ ರಾಜತಾಂತ್ರಿಕ ಪ್ರಯತ್ನಗಳು ನೆನೆಗುದಿಗೆ ಬಿದ್ದಂತಾಗಿದೆ.
ಅಮೆರಿಕದ ಮೇರಿಲ್ಯಾಂಡ್‌ನಲ್ಲಿರುವ ಅಮೆರಿಕ ಅಧ್ಯಕ್ಷ ವಿಶ್ರಾಂತಿಗೃಹವಾದ ಕ್ಯಾಂಪ್‌ಡೇವಿಡ್‌ನಲ್ಲಿ ಇತ್ತಂಡಗಳ ನಡುವೆ ತಾನು ರವಿವಾರ ಅಭೂತಪೂರ್ವವಾದ ಮಾತುಕತೆಗಳನ್ನು ಪ್ರತ್ಯಪ್ರತ್ಯೇಕವಾಗಿ ನಡೆಸುವುದಾಗಿ ಹೇಳಿ ಅಚ್ಚರಿ ಮೂಡಿಸಿದ್ದರು. ಆದರೆ ತಾಲಿಬಾನ್‌ನ ಹಿಂಸಾತ್ಮಕ ಅಭಿಯಾವನ್ನು ಉಂದುವರಿಸಿದ್ದು, ಅವರು ನಂಬಲರ್ಹರಲ್ಲದ ಪಾಲುದಾರರೆಂದು ತನಗೆ ಮನವರಿಕೆಯಾಗಿದೆ ಎಂದರು.
ಕೆಲವು ಪ್ರಮುಖ ತಾಲಿಬಾನ್ ನಾಯಕರು ಹಾಗೂ ಅಫ್ಘಾನ್ ಅಧ್ಯಕ್ಷರು ತನ್ನನ್ನು ರವಿವಾರ ಕ್ಯಾಂಪ್‌ಡೇವಿಡ್‌ನಲ್ಲಿ ರಹಸ್ಯವಾಗಿ ಭೇಟಿಯಾಗಲಿದ್ದಾರೆಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.
‘‘ಆದರೆ ದುರದೃಷ್ಟವಶಾತ್, ಹುಸಿ ಸಾಮರ್ಥ್ಯವನ್ನು ತೋರ್ಪಡಿಸಿಕೊಳ್ಳವುದಕ್ಕಾಗಿ ಅವರು ನಮ್ಮ ಓರ್ವ ಮಹಾನ್ ಸೈನಿಕರಲ್ಲೊಬ್ಬನನ್ನು ಹಾಗೂ ಇತರ 11 ಮಂದಿಯ ಹತ್ಯೆಗೈದಿದೆ. ನಾನು ತಕ್ಷಣವೇ ಸಭೆಯನ್ನು ರದ್ದುಪಡಿಸಿದ್ದೇನೆ ಹಾಗೂ ಶಾಂತಿ ಮಾತುಕತೆಗಳನ್ನು ಸ್ಥಗಿತಗೊಳಿಸಿದ್ದೇನೆ’’ ಎಂದವರು ಹೇಳಿದ್ದಾರೆ.
ತಮ್ಮ ಚೌಕಾಶಿಗೆ ಹೆಚ್ಚಿನ ಬಲಬರುವಂತೆ ಮಾಡಲು ಹಲವಾರು ಮಂದಿಯನ್ನು ಕೊಲ್ಲುವ ಈ ಜನರು ಎಂಥವರು?. ಅವರು ಪರಿಸ್ಥಿತಿಯನ್ನು ಹದಗೆಡಿಸಿದ್ದಾರೆ ಎಂದು ಟ್ರಂಪ್ ತಾಲಿಬಾನ್ ಬಂಡುಕೋರರ ವಿರುದ್ಧ ಕಿಡಿಕಾರಿದ್ದಾರೆ.
ಕಾಬೂಲ್‌ನಲ್ಲಿ ಗುರುವಾರ ನಡೆದ ಕಾರ್‌ಬಾಂಬ್ ದಾಳಿಯಲ್ಲಿ ಓರ್ವ ಅಮೆರಿಕ ಸೈನಿಕ ಹಾಗೂ ರೊಮೆನಿಯಾದ ಸೇನಾಪಡೆಯ ಸಿಬ್ಬಂದಿಯೊಬ್ಬ ಸೇರಿದಂತೆ 12 ಮಂದಿ ಸಾವನ್ನಪ್ಪಿದ್ದರು. ಅಫ್ಘಾನಿಸ್ತಾನದಿಂದ ಅಮೆರಿಕ ನೇತೃತ್ವದ ವಿದೇಶಿ ಸೇನಾಪಡೆಗಳ ಹಿಂತೆಗೆತಕ್ಕೆ ಸಂಬಂಧಿಸಿ ಅಮೆರಿಕದ ಶಾಂತಿ ಪ್ರತಿನಿಧಿ ಹಾಗೂ ತಾಲಿಬಾನ್ ಬಂಡುಕೋರ ಪ್ರತಿನಿಧಿಗಳ ನಡುವೆ ಮಾತುಕತೆ ನಡೆಯುತ್ತಿರುವ ಸಂದರ್ಭದಲ್ಲೇ ಈ ದಾಳಿ ನಡೆದಿದೆ.







