ಭಾರತದಲ್ಲಿ ಪೊಲೀಸ್ ಹಿಂಸೆಗೆ ವ್ಯಾಪಕ ಅನುಮೋದನೆ
ಹೊಸದಿಲ್ಲಿ,ಸೆ.8: ಪೊಲೀಸರು ಕ್ರಿಮಿನಲ್‌ಗಳೊಂದಿಗೆ ಹಿಂಸಾತ್ಮಕವಾಗಿ ನಡೆದುಕೊಳ್ಳುವುದು ಸಮರ್ಥನೀಯವಾಗಿದೆ ಎಂದು ಶೇ.75ರಷ್ಟು ಪೊಲೀಸರು ನಂಬಿದ್ದಾರೆ. ಕ್ರಿಮಿನಲ್‌ಗಳಿಂದ ತಪ್ಪೊಪ್ಪಿಗೆಗಳನ್ನು ಪಡೆದುಕೊಳ್ಳಲು ಅವರನ್ನು ಥಳಿಸುವುದರಲ್ಲಿ ಯಾವುದೇ ತಪ್ಪು ಇಲ್ಲ ಎನ್ನುವುದು ಶೇ.80ರಷ್ಟು ಪೊಲೀಸರ ಅನಿಸಿಕೆಯಾಗಿದೆ. ಕ್ರಿಮಿನಲ್‌ಗಳೊಂದಿಗೆ ಪೊಲೀಸರ ಹಿಂಸಾತ್ಮಕ ವರ್ತನೆಯನ್ನು ಶೇ.50ರಷ್ಟು ನಾಗರಿಕರೂ ಬೆಂಬಲಿಸಿದ್ದಾರೆ.
ಇವು ಮಾನವ ಹಕ್ಕುಗಳ ಪ್ರತಿಪಾದಕ ‘ಕಾಮನ್ ಕಾಸ್ ’ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ಬೆಂಬಲಿತ ಸಂಶೋಧನಾ ಸಂಸ್ಥೆ ಸೆಂಟರ್ ಫಾರ್‌ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್‌ನ ಲೋಕನೀತಿ ಕಾರ್ಯಕ್ರಮ ಮಂಡಿಸಿರುವ ‘ಭಾರತದಲ್ಲಿ ಪೊಲೀಸ್ ವ್ಯವಸ್ಥೆಯ ಸ್ಥಿತಿಗತಿ ವರದಿ, 2019’ರಲ್ಲಿ ಉಲ್ಲೇಖಿಸಲಾಗಿರುವ ಕೆಲವು ಅಂಶಗಳು.
21 ರಾಜ್ಯಗಳ ಸುಮಾರು 12,000 ಪೊಲೀಸ್ ಸಿಬ್ಬಂದಿಗಳನ್ನು ಸಂದರ್ಶನಕ್ಕೊಳಪಡಿಸುವ ಮೂಲಕ ಭಾರತದಲ್ಲಿ ಪೊಲೀಸ್ ವ್ಯವಸ್ಥೆಯ ವಿವಿಧ ಮಗ್ಗಲುಗಳನ್ನು ವರದಿಯಲ್ಲಿ ವಿಶ್ಲೇಷಿಸಲಾಗಿದೆ. ಸಂಶೋಧಕರು ಈ ಪೊಲೀಸ್ ಸಿಬ್ಬಂದಿಗಳ 10,000ಕ್ಕೂ ಅಧಿಕ ಕುಟುಂಬ ಸದಸ್ಯರನ್ನೂ ಸಂದರ್ಶನಕ್ಕೊಳಪಡಿಸಿದ್ದರು ಮತ್ತು ಸರಕಾರಿ ಮಾಹಿತಿಗಳನ್ನು ಬಳಸಿಕೊಂಡು ದೀರ್ಘಾವಧಿಯ ಪ್ರವೃತ್ತಿಗಳ ಕುರಿತು ಅಧ್ಯಯನ ನಡೆಸಿದ್ದರು.
ಭಾರತೀಯ ಪೊಲೀಸರಿಗೆ ಲಭ್ಯವಿರುವ ಸಂಪನ್ಮೂಲಗಳು,ಅವರು ಕಾರ್ಯ ನಿರ್ವಹಿಸುತ್ತಿರುವ ಪರಿಸ್ಥಿತಿ,ಅವರ ಅಭಿಪ್ರಾಯಗಳು ಮತ್ತು ಮನೋವೃತ್ತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ತಯಾರಿಸಲಾಗಿದೆ.