ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಸಂಬಂಧ ಸಮಿತಿ ರಚನೆ: ಮುಖ್ಯಮಂತ್ರಿ ಭರವಸೆ
ಬೆಂಗಳೂರು, ಸೆ.9: ಜನಸಂಖ್ಯೆಗೆ ಅನುಗುಣವಾಗಿ ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ನೀಡುವ ಸಂಬಂಧ ಹೊಸ ಸಮಿತಿ ರಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಸೋಮವಾರ ನಗರದ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ವಾಲ್ಮೀಕಿ ಸಮುದಾಯದ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವದಲ್ಲಿ ಸಚಿವ ಶ್ರೀರಾಮುಲು, ಶಾಸಕ ಶಿವನಗೌಡ ನಾಯಕ್, ರಾಜುಗೌಡ ನಾಯಕ್ ಸೇರಿದಂತೆ ನಿಯೋಗ ಮುಖ್ಯಮಂತ್ರಿಯನ್ನು ಭೇಟಿಯಾಗಿ ವಾಲ್ಮೀಕಿ ಸಮುದಾಯಕ್ಕೆ ಶೇ.7.5 ರಷ್ಟು ಮೀಸಲಾತಿ ನೀಡಬೇಕು ಎಂದು ಮನವಿ ಮಾಡಿದರು.
ವಾಲ್ಮೀಕಿ ಸಮುದಾಯದ ನಿಯೋಗಕ್ಕೆ ಸ್ಪಂದಿಸಿದ ಸಿಎಂ ಯಡಿಯೂರಪ್ಪ, ಮೀಸಲಾತಿ ನೀಡಬೇಕು ಎಂಬುದು ಹಲವು ದಿನಗಳ ಬೇಡಿಕೆಯಾಗಿದೆ. ಹೀಗಾಗಿ, ನಿಮ್ಮ ಬೇಡಿಕೆಯನ್ನು ಪೂರೈಸಲು ಕ್ರಮ ವಹಿಸಲಾಗುವುದು. ಈ ಸಂಬಂಧ ಚರ್ಚಿಸಿ, ಸಮಿತಿಯನ್ನು ರಚನೆ ಮಾಡಲಾಗುವುದು. ಅದು ವರದಿ ನೀಡಿದ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದ್ದಾರೆ.
ಸಿಎಂ ಭೇಟಿಯಾದ ಬಳಿಕ ಮಾತನಾಡಿದ ಪ್ರಸನ್ನಾನಂದ ಸ್ವಾಮೀಜಿ, ಸುಮಾರು ಐದು ದಶಕಗಳಿಂದ ಮೀಸಲಾತಿ ಸಂಬಂಧ ಹೋರಾಟ ಮಾಡಲಾಗುತ್ತಿದೆ. ರಾಜ್ಯದಲ್ಲಿ 60-70 ಲಕ್ಷದಷ್ಟು ಜನಸಂಖ್ಯೆಯಿದ್ದೇವೆ. ಆದರೆ, ನಾವಿನ್ನೂ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿದ್ದೇವೆ. ಈ ಸಂಬಂಧ ಮುಖ್ಯಮಂತ್ರಿಗೆ ನಮ್ಮ ಸಮುದಾಯದ ನೋವನ್ನು ಮನವರಿಕೆ ಮಾಡಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಸಚಿವ ಶ್ರೀರಾಮುಲು ಮಾತನಾಡಿ, ವಾಲ್ಮೀಕಿ ಸಮುದಾಯಕ್ಕೆ ಹಲವು ರಾಜ್ಯಗಳಲ್ಲಿ ಮೀಸಲಾತಿ ನೀಡಲಾಗಿದೆ. ಆದರೆ, ನಮ್ಮ ರಾಜ್ಯದಲ್ಲಿ ಇರಲಿಲ್ಲ. ಈ ಸಂಬಂಧ ಸಿಎಂಗೆ ಮನವರಿಕೆ ಮಾಡಿಕೊಟ್ಟಿದ್ದು, ಅವರೂ ನಮಗೆ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಸುಪ್ರೀಂಕೋರ್ಟ್ ನಿರ್ದೇಶನದ ಪ್ರಕಾರ ಶೇ.50ಕ್ಕಿಂತ ಅಧಿಕ ಮೀಸಲಾತಿ ನೀಡಬಾರದು ಎಂದಿದೆ. ಆದರೆ, ಬೇರೆ ಬೇರೆ ರಾಜ್ಯಗಳಲ್ಲಿ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲಾಗಿದೆ. ಈ ನಿಟ್ಟಿನಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ದಾಸ್ ನೇತೃತ್ವದಲ್ಲಿ ಸಮಿತಿ ನೀಡುವ ವರದಿ ಹಾಗೂ ಹೊಸ ಸಮಿತಿ ನೀಡುವ ವರದಿಯನ್ನು ಆಧರಿಸಿ ಮೀಸಲಾತಿ ಪ್ರಮಾಣ ಹೆಚ್ಚಿಸುವ ಭರವಸೆ ಸಿಎಂ ನೀಡಿದ್ದಾರೆ ಎಂದು ತಿಳಿಸಿದರು.