ಹೆಲ್ಮೆಟ್ ಕಡ್ಡಾಯ ನಿಯಮ ಕಾನೂನು ಬದ್ಧವಾಗಿದೆ: ಹೈಕೋರ್ಟ್
ಸವಾರರಿಗೆ ಕಡ್ಡಾಯ ಹೆಲ್ಮೆಟ್ ಪ್ರಶ್ನಿಸಿ ಪಿಐಎಲ್
![ಹೆಲ್ಮೆಟ್ ಕಡ್ಡಾಯ ನಿಯಮ ಕಾನೂನು ಬದ್ಧವಾಗಿದೆ: ಹೈಕೋರ್ಟ್ ಹೆಲ್ಮೆಟ್ ಕಡ್ಡಾಯ ನಿಯಮ ಕಾನೂನು ಬದ್ಧವಾಗಿದೆ: ಹೈಕೋರ್ಟ್](https://www.varthabharati.in/sites/default/files/images/articles/2019/09/9/209255-1568052357.jpeg)
ಬೆಂಗಳೂರು, ಸೆ.9: ದ್ವಿಚಕ್ರ ವಾಹನ ಸವಾರರು ಕಡ್ಡಾಯ ಹೆಲ್ಮೆಟ್ ಹಾಕಬೇಕೆಂಬ ನಿಯಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೆಲ್ಮೆಟ್ ಕಡ್ಡಾಯ ನಿಯಮ ಕಾನೂನು ಬದ್ಧವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಹೈಕೋರ್ಟ್, ದಂಡ ವಿಧಿಸುವ ಎಚ್ಚರಿಕೆ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿತು.
ಈ ಕುರಿತು ಕೆ.ಜಗನ್ನಾಥ್ ಶೆಟ್ಟಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಮುಹಮ್ಮದ್ ನವಾಝ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಕೆ.ಜಗನ್ನಾಥ್ ಶೆಟ್ಟಿ ಅವರು ವಾದಿಸಿ, ದ್ವಿಚಕ್ರ ವಾಹನ ಸವಾರಿ ಮಾಡುವಾಗ ಹೆಲ್ಮೆಟ್ ಹಾಕುವುದು, ಬಿಡುವುದು ನನಗೆ ಸಂಬಂಧಿಸಿದ್ದು, ಹೆಲ್ಮೆಟ್ ಹಾಕಲೇಬೇಕು ಎನ್ನುವುದು ಮೂಲಭೂತ ಹಕ್ಕಿನ ಉಲ್ಲಂಘನೆ ಆಗುತ್ತದೆ ಎಂದು ಪೀಠಕ್ಕೆ ತಿಳಿಸಿದರು. ನ್ಯಾಯಪೀಠವು ಇದು ಪಿಐಎಲ್ ವ್ಯಾಪ್ತಿಗೆ ಬರುವುದಿಲ್ಲ. ಹೆಲ್ಮೆಟ್ ಹಾಕುವುದರಿಂದ ಜೀವ ಉಳಿಯುತ್ತದೆ. ಹೀಗಾಗಿ, ಹೆಲ್ಮೆಟ್ ಕಡ್ಡಾಯ ನಿಯಮ ಕಾನೂನು ಬದ್ಧವಾಗಿದೆ ಎಂದು ಸರಕಾರದ ಆದೇಶವನ್ನು ಎತ್ತಿ ಹಿಡಿಯಿತು. ಅಲ್ಲದೆ, ದಂಡ ವಿಧಿಸುವ ಎಚ್ಚರಿಕೆಯನ್ನು ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿತು.