ಶಿಕ್ಷಕರ ವರ್ಗಾವಣೆ: ಕೌನ್ಸೆಲಿಂಗ್ ವೇಳೆ ಅಮಾನವೀಯವಾಗಿ ವರ್ತಿಸಿದ ಅಧಿಕಾರಿಗಳು- ಆರೋಪ
ಬೆಂಗಳೂರು, ಸೆ.10: ಶಿಕ್ಷಕರ ಕಡ್ಡಾಯ ವರ್ಗಾವಣೆ ಕೌನ್ಸಿಲಿಂಗ್ ವೇಳೆಯಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿರುವ ಶಿಕ್ಷಕಿಯೊಬ್ಬರನ್ನು ವರ್ಗಾವಣೆ ಪಟ್ಟಿಯಿಂದ ಕೈ ಬಿಡಲು ಮನವಿ ಮಾಡಿದರೂ ಅಧಿಕಾರಿಗಳು ನಿರಾಕರಿಸಿ ಅಮಾನವೀಯ ವರ್ತನೆ ತೋರಿದ್ದಾರೆ ಎಂದು ಆರೋಪಿಸಲಾಗಿದೆ.
ನಗರದ ಎಚ್‌ಎಸ್‌ಆರ್ ಬಡಾವಣೆ ಸಮೀಪದ ಯಳ್ಳುಕುಂಟೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕಿ ಮಹೇಶ್ವರಿ ಎಂಬುವವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಮಾರಣಾಂತಿಕ ಕಾಯಿಲೆಯಿಂದ ನರಳುತ್ತಿದ್ದೇನೆ. ವರ್ಗಾವಣೆಯಾದರೆ ತೊಂದರೆಯಾಗುತ್ತದೆ ಎಂದು ಬೇಡಿಕೊಂಡರೂ ಅಧಿಕಾರಿಗಳು ಕನಿಕರ ತೋರದೆ ಅಮಾನವೀಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ.
ಕೌನ್ಸಿಲಿಂಗ್ ಸಮಯದಲ್ಲಿ ಇವರನ್ನು ವರ್ಗಾವಣೆ ಪಟ್ಟಿಯಿಂದ ಕೈಬಿಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ, ಅವರು ವರ್ಗಾವಣೆ ಮಾಡಿದ ಸ್ಥಳಕ್ಕೆ ಹೋಗಲೇಬೇಕೆಂದು ತಾಕೀತು ಮಾಡಿದ್ದಾರೆ. ಕೌನ್ಸಿಲಿಂಗ್‌ಗೆ ಹಾಜರಾಗಲು ಮಹೇಶ್ವರಿಗೆ ಆಗದಿದ್ದರೂ ತನ್ನಿಬ್ಬರು ಹೆಣ್ಣು ಮಕ್ಕಳೊಂದಿಗೆ ಇಲ್ಲಿನ ಬಸವನಗುಡಿಯ ಟಿನ್ ಶಾಲೆಯಲ್ಲಿ ಕೌನ್ಸೆಲಿಂಗ್‌ಗೆ ಹಾಜರಾಗಿದ್ದರು.
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು, ಕೌನ್ಸಿಲಿಂಗ್ ನಡೆಯುವ ಸ್ಥಳದಲ್ಲೇ ಮಲಗಿ ವಿಶ್ರಾಂತಿ ಪಡೆದಿದ್ದಾರೆ. ತಮ್ಮ ಸಮಯ ಬಂದಾಗ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರೂ, ಅಧಿಕಾರಿಗಳಿಗೆ ಮನವರಿಕೆಯಾಗಿಲ್ಲ. ಅಲ್ಲದೆ, ನಿಮ್ಮ ಕಾಯಿಲೆ ವಿಷಯ ನಮ್ಮ ಹತ್ತಿರ ಹೇಳಬೇಡಿ. ಸರಕಾರದ ನಿಯಮವನ್ನು ಪಾಲಿಸಬೇಕು ಎಂದು ತಾಕೀತು ಮಾಡಿದ್ದಾರೆ ಎಂದು ಶಿಕ್ಷಕಿ ಮಹೇಶ್ವರಿ ಹೇಳಿದ್ದಾರೆ.
ಮಹೇಶ್ವರಿ ಒಬ್ಬರಷ್ಟೇ ಅಲ್ಲ, ಹಲವು ಕಾಯಿಲೆಗಳಿಂದ ಬಳಲುತ್ತಿದ್ದ ಶಿಕ್ಷಕರು ವರ್ಗಾವಣೆಯನ್ನು ಮಾಡದಂತೆ ಮನವಿ ಸಲ್ಲಿಸಿದ್ದರೂ ಯಾವುದಕ್ಕೂ ಮನ್ನಣೆ ನೀಡದ ಅಧಿಕಾರಿಗಳು ವರ್ಗಾವಣೆ ಮಾಡಿದ ಸ್ಥಳಕ್ಕೆ ಹೋಗಲೇಬೇಕೆಂದು ಸೂಚಿಸುತ್ತಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಮಧ್ಯಪ್ರವೇಶಿಸಿ ವಿಶೇಷ ಪ್ರಕರಣಗಳನ್ನು ಸಂದರ್ಭಗಳಲ್ಲಿ ಗಮನದಲ್ಲಿಟ್ಟುಕೊಂಡು ವರ್ಗಾವಣೆ ಮಾಡದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಶಿಕ್ಷಕರ ಸಂಘಟನೆಗಳು ಆಗ್ರಹಪಡಿಸಿವೆ.
ಬೆಂಗಳೂರು ನಗರದ ದಕ್ಷಿಣ ವಲಯ 3 ಕ್ಕೆ ಸೇರಿದ ಎಳ್ಕುಂಟೆಯ ಪ್ರಾಥಮಿಕ ಶಾಲಾ ಶಿಕ್ಷಕಿಯಾದ ಮಹೇಶ್ವರಿ ಎಂಬ ಕ್ಯಾನ್ಸರ್ ಪೀಡಿತರಿಗೆ ವರ್ಗಾವಣೆಯ ವಿನಾಯಿತಿಯನ್ನು ನೀಡದೇ ಇರುವ ಕುರಿತ ವಿಚಾರ ನನ್ನ ಗಮನಕ್ಕೆ ಬಂದಿದೆ. ಇದನ್ನು ಮಾನವೀಯ ನೆಲೆಗಟ್ಟಿನಲ್ಲಿ ಪರಿಗಣಿಸಲು ತಿಳಿಸಿ ಈಗಾಗಲೇ ಆಗಿರುವ ವರ್ಗಾವಣೆಯನ್ನು ರದ್ದು ಮಾಡಿ, ಅವರು ಕೆಲಸ ನಿರ್ವಹಿಸುತ್ತಿದ್ದ ಸ್ಥಳದಲ್ಲೇ ಮುಂದುವರೆಯಲು ಕ್ರಮ ವಹಿಸಲು ಸೂಚಿಸಿದ್ದೇನೆ.
-ಎಸ್.ಸುರೇಶ್ ಕುಮಾರ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ







