ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಮಹಾಸಭೆ

ಮಂಗಳೂರು, ಸೆ.10: ಮಂಜೇಶ್ವರದ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್‌ನ ಗಿಳಿವಿಂಡಿನಲ್ಲಿ ಡಾ.ವೀರಪ್ಪ ಮೊಯಿಲಿ ಅಧ್ಯಕ್ಷತೆಯಲ್ಲಿ ಟ್ರಸ್ಟ್ ಮಹಾಸಭೆ ನಡೆಯಿತು.
ಆರ್ಥಿಕ ವರ್ಷದ ಲೆಕ್ಕಪತ್ರಗಳು ಸ್ವೀಕಾರವಾದ ಬಳಿಕ ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಪರಾಮರ್ಶೆ ನಡೆಸಲಾಯಿತು. ನೂತನ ಕೋಶಾಧಿ ಕಾರಿಯಾಗಿ ಎಂ.ಜಯಂತ ಕಿಣಿ ಮಂಜೇಶ್ವರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ನಿರ್ಮಾಣ ಪ್ರಗತಿಯಲ್ಲಿರುವ ರಂಗಮಂದಿರ ಕಾಮಗಾರಿಯ ಬಗ್ಗೆ ಚರ್ಚಿಸಲಾಯಿತು. ನವೆಂಬರ್ ತಿಂಗಳಲ್ಲಿ ಸಿದ್ಧಗೊಳ್ಳುವ ನಿರೀಕ್ಷೆಯಲ್ಲಿರುವ ಈ ರಂಗಮಂದಿರದ ಲೋಕಾರ್ಪಣೆಯಾಗುವ ಸಂದರ್ಭ ನಡೆಯಬೇಕಾದ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ಡಾ.ಮೊಯ್ಲಿ ಸಲಹೆ- ಸೂಚನೆ ನೀಡಿದರು.
ಇದರ ರೂಪುರೇಖೆ ತಯಾರಿಸಲು ಸಮಿತಿಯೊಂದನ್ನು ರಚಿಸಲಾಯಿತು. ಮಾಸಿಕ ಸಭೆಯಲ್ಲಿ ಟ್ರಸ್ಟಿಗಳಾಗಿ ನಾಮಕಣಗೊಂಡಿದ್ದ ಡಾ.ಚಿನ್ನಪ್ಪ ಗೌಡ, ಡಾ. ಚಂದ್ರಶೇಖರ ಚೌಟ ಅವರನ್ನು ಸಭೆಯ ಸರ್ವಾನುಮತದಿಂದ ಸ್ವಾಗತಿಸಿತು.
ಟ್ರಸ್ಟಿ ಪ್ರೊ.ವಿವೇಕ ರೈ, ಡಾ.ಚಿನ್ನಪ್ಪ ಗೌಡ, ಡಾ.ಚಂದ್ರಶೇಖರ ಚೌಟ, ಎಂ.ಜೆ. ಕಿಣಿ, ಸುಭಾಶ್ಚಂದ್ರ ಕಣ್ವತೀರ್ಥ, ತೇಜೋಮಯ, ಡಾ.ರಮಾನಂದ ಬನಾರಿ, ಜಯಾನಂದ ಹಾಗೂ ಜಿಲ್ಲಾಧಿಕಾರಿ ಕಚೇರಿ ಹಾಗೂ ಇತರ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.





