'ಮೈ ಗ್ರೀನ್ ಸ್ಕೂಲ್' ಕೃತಿಯ ಕನ್ನಡಾನುವಾದ ಬಿಡುಗಡೆ

ಮಣಿಪಾಲ, ಸೆ.10: ಭೂತಾನಿನ ಮಾಜಿ ಶಿಕ್ಷಣ ಸಚಿವರಾದ ಠಾಕೂರ್ ಸಿಂಗ್ ಪೌಡೈಲ್ ಅವರು ಬರೆದ 'ಮೈ ಗ್ರೀನ್ ಸ್ಕೂಲ್' ನ ಕನ್ನಡಾನುವಾದ ಱನನ್ನ ಪರ್ಣಿ ಶಾಲೆೞಕೃತಿಯನ್ನು ಮಣಿಪಾಲ ಮಾಹೆಯ ಕುಲಪತಿ ಡಾ.ಎಚ್. ವಿನೋದ್ ಭಟ್ ಅವರು ಇತ್ತೀಚೆಗೆ ಇಲ್ಲಿ ಬಿಡುಗಡೆಗೊಳಿಸಿದರು.
ಕೃತಿಯನ್ನು ಮಣಿಪಾಲ ಯುನಿವರ್ಸಲ್ ಪ್ರೆಸ್ ಪ್ರಕಟಿಸಿದೆ. ಉಡುಪಿಯ ಭಾಷಾ ವಿದ್ವಾಂಸ ಡಾ.ಎನ್.ತಿರುಮಲೇಶ್ವರ ಭಟ್ ಅವರು ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಪುಸ್ತಕದ ಕುರಿತು ಮಾತನಾಡಿದ ಠಾಕೂರ್ ಸಿಂಗ್, ಪ್ರಕೃತಿಯೊಂದಿಗೆ ಗರಿಷ್ಠ ಸಂಬಂಧವಿರಿಸಿಕೊಂಡು ಸಹಬಾಳ್ವೆ ನಡೆಸುವುದರಿಂದ ವ್ಯಕ್ತಿಯೊಬ್ಬನ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ ಎಂಬುದನ್ನು ನಾನೀ ಕೃತಿಯಲ್ಲಿ ಪ್ರತಿಪಾದಿಸಿದ್ದೇನೆ. ಪ್ರಕೃತಿಯೊಂದಿಗೆ ಬಾಳುವೆ ನಡೆಸುವ ಬದುಕಿನ ಸಂಸ್ಕೃತಿ ಶಾಲಾ ಮಟ್ಟದಲ್ಲಿ ಕಾರ್ಯರೂಪಕ್ಕೆ ಬಂದರೆ, ಪರಿಸರ ಸ್ನೇಹಿ ಹಾಗೂ ಮಾನವೀಯ ಸೂಕ್ಷ್ಮತೆಗಳನ್ನು ಒಳಗೊಂಡ ಮಾನವನ ನಿರ್ಮಾಣ ಸಾಧ್ಯ ಎಂದವರು ಹೇಳಿದರು.
ಅನುವಾದಕ ಡಾ.ಎನ್.ಟಿ.ಭಟ್ ಮಾತನಾಡಿ, ನನ್ನೆಲ್ಲಾ ಅನುವಾದಗಳಲ್ಲಿ ಮಾಡುವಂತೆ ಈ ಕೃತಿಯಲ್ಲೂ, ಮೂಲ ಭಾಷೆಯ ಎಲ್ಲಾ ಸ್ವಂತಿಕೆ ಹಾಗೂ ಸೃಜನಶೀಲತೆ ಕಳೆದುಹೋಗದಂತೆ ಜಾಗೃತೆ ವಹಿಸಿದ್ದೇನೆ. ಈ ಪುಸ್ತಕ ಪರಿಸರ ಸೂಕ್ಷ್ಮತೆಯ ಬಗ್ಗೆ ಹೇಳುತ್ತದೆ. ಪರ್ಣ ಎಂದರೆ ಎಲೆ, ಹಚ್ಚ ಹಸಿರನ್ನು ಎಲೆಯೊಂದಿಗೆ ಸಮೀಕರಿಸಿ ಪರ್ಣಿ ಎಂದು ಬಳಸಿದ್ದೇನೆ ಎಂದರು.
ಮಣಿಪಾಲ ಯುನಿವರ್ಸಲ್ ಪ್ರೆಸ್‌ನ ಮುಖ್ಯ ಸಂಪಾದಕಿ ಪ್ರೊ.ನೀತಾ ಇನಾಂದಾರ್ ಅವರು ಅತಿಥಿಗಳನ್ನು ಸ್ವಾಗತಿಸಿ, ಅನುವಾದದ ಸವಾಲುಗಳ ಕುರಿತು ಮಾತನಾಡಿದರು.