ಸರಕಾರಿ ಆಂಗ್ಲ ಮಾಧ್ಯಮ ಶಾಲೆಗಳ ಆರಂಭ ಆತುರದ ನಿರ್ಧಾರ: ಮರು ಪರಿಶೀಲನೆಗೆ ಸಾಹಿತಿ-ಚಿಂತಕರ ಆಗ್ರಹ
ಸಾಂದರ್ಭಿಕ ಚಿತ್ರ
ಬೆಂಗಳೂರು, ಸೆ.11: ಹಿಂದಿನ ಮೈತ್ರಿ ಸರಕಾರದ ಅವಧಿಯಲ್ಲಿ ಒಂದು ಸಾವಿರ ಸರಕಾರಿ ಆಂಗ್ಲ ಮಾಧ್ಯಮ ಶಾಲೆಗಳ ಆರಂಭ ಮಾಡಿದ್ದು ಆತುರ ನಿರ್ಧಾರ ಹಾಗೂ ಅವೈಜ್ಞಾನಿಕವಾದುದು. ಹೀಗಾಗಿ, ಇದನ್ನು ರಾಜ್ಯ ಸರಕಾರ ಮರು ಪರಿಶೀಲನೆ ಮಾಡಬೇಕು ಎಂದು ಸಾಹಿತಿಗಳು, ಚಿಂತಕರು ಆಗ್ರಹಿಸಿದ್ದಾರೆ.
ಬುಧವಾರ ನಗರದ ಕಸಾಪದಲ್ಲಿ ಕನ್ನಡ ಕ್ರಿಯಾ ಸಮಿತಿ ಹಾಗೂ ಕರ್ನಾಟಕ ವಿಕಾಸ ರಂಗದಿಂದ ಆಯೋಜಿಸಿದ್ದ ಸರಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಕನ್ನಡ ಮಾಧ್ಯಮ: ಆತಂಕ ಮತ್ತು ನಿವಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬಹುತೇಕರು ಹಿಂದಿನ ಸರಕಾರದ ನಿರ್ಣಯವನ್ನು ಮರುಪರಿಶೀಲನೆ ಮಾಡಬೇಕು ಎಂದು ಆಗ್ರಹಪಡಿಸಿದರು.
ಈ ವೇಳೆ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ, ಭಾಷಾವಾರು ಪ್ರಾಂತ್ಯಗಳಲ್ಲಿ ಅಲ್ಲಿನ ಮಾತೃ ಭಾಷೆಯಲ್ಲಿಯೇ ಶಿಕ್ಷಣ ಸಿಗಬೇಕು. ಆದರೆ, ಇತ್ತೀಚಿಗೆ ಪ್ರಾದೇಶಿಕ ಭಾಷೆಗಳು ಶಿಕ್ಷಣದಲ್ಲಿ ಇಲ್ಲದಂತಾದರೆ ಮುಂದಿನ ದಿನಗಳಲ್ಲಿ ಆಡಳಿತದ ಭಾಷೆಯೂ ಬದಲಾಗುತ್ತದೆ ಎಂದು ಹೇಳಿದರು.
ಹಿಂದಿನ ಸರಕಾರ ಒಂದು ಸಾವಿರ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಮಾಡುವ ಮೊದಲು ಶಿಕ್ಷಣ ತಜ್ಞರನ್ನೊಳಗೊಂಡ ಸಮಿತಿ ರಚನೆ ಮಾಡಬೇಕಿತ್ತು. ಆದರೆ, ಏಕಾಏಕಿ ಜಾರಿ ಮಾಡಿರುವುದು ಸರಿಯಲ್ಲ. ಶಿಕ್ಷಣದ ಕುರಿತು ಸರಕಾರಕ್ಕೆ ಗಂಭೀರವಾದ ಕಾಳಜಿಯಿದ್ದರೆ ಮಾತೃಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು. ಖಾಸಗೀಕರಣದಿಂದ ಶಿಕ್ಷಣವನ್ನು ಮುಕ್ತಿಗೊಳಿಸಬೇಕು ಎಂದರು.
ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, ಇಂಗ್ಲಿಷ್ ಶಿಕ್ಷಣ ನಮ್ಮ ಸಂಸ್ಕೃತಿಯನ್ನು ನಾಶ ಮಾಡುತ್ತದೆ. ನಮಗೆ ಎಲ್ಲ ಭಾಷೆಗಳೂ ಅಗತ್ಯವಿದೆ. ಆದರೆ, ಪ್ರಾಥಮಿಕ ಶಿಕ್ಷಣ ಕನ್ನಡದಲ್ಲಿಯೇ ಇರಬೇಕು. ಮಾತೃಭಾಷೆಯ ಬಗ್ಗೆ ಕಾಳಜಿ, ಪ್ರೀತಿಯಿರುವ ಎಲ್ಲರೂ ಆಂಗ್ಲ ಮಾಧ್ಯಮ ಶಾಲೆಗಳನ್ನು ಖಂಡಿಸಬೇಕು ಎಂದು ಹೇಳಿದರು.
ರಾಜ್ಯಸಭಾ ಸದಸ್ಯ ಹಾಗೂ ಸಾಹಿತಿ ಎಲ್.ಹನುಮಂತಯ್ಯ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಂಗ್ಲ ಮಾಧ್ಯಮ ಶಾಲೆಗಳ ಕಡೆ ಆಕರ್ಷಿತರಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಆದರ್ಶ ಶಾಲೆಗಳನ್ನು ಆರಂಭ ಮಾಡುವ ಕಡೆ ಸರಕಾರಗಳು ಗಮನ ನೀಡುವುದು ಸೂಕ್ತ ಎಂದು ತಿಳಿಸಿದರು.
ನಮ್ಮಲ್ಲಿ ಕನ್ನಡ ಮಾಧ್ಯಮ ಶಿಕ್ಷಣದ ಗುಣಮಟ್ಟದಲ್ಲಿ ಕೊರತೆಯಿದೆ. ದಿಲ್ಲಿಯ ಸರಕಾರಿ ಶಾಲೆಗಳು ದೇಶಕ್ಕೆ ಮಾದರಿಯಾಗಿದ್ದು, ಆಂಗ್ಲ ಮಾಧ್ಯಮ ಶಾಲೆಗಳನ್ನು ಮೀರಿಸುವಂತಿವೆ. ಎಲ್ಲ ರೀತಿಯ ಸೌಲಭ್ಯಗಳು ಅಲ್ಲಿ ಸಿಗುತ್ತಿವೆ. ಆದರೆ, ನಮ್ಮಲ್ಲಿ ದಿನದಿಂದ ದಿನಕ್ಕೆ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದರು.
ರಾಜ್ಯದಲ್ಲಿ ಕಟ್ಟಕಡೆ ಸಮುದಾಯದ ಮಗುವನ್ನೂ ಆಂಗ್ಲ ಮಾಧ್ಯಮದಲ್ಲಿಯೇ ಓದಿಸಬೇಕು ಎಂದು ಆಸೆಪಡುತ್ತಾರೆ. ಹೀಗಾಗಿ, ಎಲ್ಲರಿಗೂ ಸಮಾನ ಶಿಕ್ಷಣ ಸಿಗುವಂತಾಗಬೇಕು. ಅದಕ್ಕಾಗಿ ಕನಿಷ್ಠ ಪ್ರಾಥಮಿಕ ಶಿಕ್ಷಣವಾದರೂ ರಾಷ್ಟ್ರೀಕರಣ ಮಾಡಬೇಕು. ಎಲ್ಲರಿಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು. ಜಿಡಿಪಿಯಲ್ಲಿ ಶೇ.12 ರಷ್ಟು ಶಿಕ್ಷಣಕ್ಕೆ ಮೀಸಲಿಡಬೇಕು. ರಾಜ್ಯಭಾಷೆಯಲ್ಲಿಯೇ ಶಿಕ್ಷಣ ನೀಡಬೇಕು ಎಂದು ಅವರು ಆಗ್ರಹಿಸಿದರು.
ಸಭೆಯಲ್ಲಿ ಹಿರಿಯ ಸಾಹಿತಿ ಚಿದಾನಂದಮೂರ್ತಿ, ಕವಿ ಸಿದ್ದಲಿಂಗಯ್ಯ, ಶಿಕ್ಷಣ ತಜ್ಞ ನಿರಂಜನಾರಾಧ್ಯ, ಮುಖ್ಯಮಂತ್ರಿ ಚಂದ್ರು, ಕಸಾಪ ಅಧ್ಯಕ್ಷ ಮನುಬಳಿಗಾರ್, ಡಾ.ಪದ್ಮರಾಜ ದಂಡಾವತಿ, ಕ್ರಿಯಾ ಸಮಿತಿ ಅಧ್ಯಕ್ಷ ಮ.ಗು.ಸದಾನಂದಯ್ಯ ಸೇರಿದಂತೆ ಹಲವರಿದ್ದರು.
ಶಿಕ್ಷಣದಲ್ಲಿ ಮಾತೃಭಾಷೆಯ ಮಹತ್ವದ ಕುರಿತು ಇಂದಿನ ಅಧಿಕಾರಿಗಳಿಗೆ ಹಾಗೂ ರಾಜಕಾರಣಿಗಳಿಗೆ ತಿಳುವಳಿಕೆ ನೀಡಬೇಕಿದೆ. ಮಾಧ್ಯಮ ಮಾಡುವ ಮೂಲಕ ಭಾಷೆ ಕಲಿಸುತ್ತೇವೆ ಎನ್ನುವುದು ಅವೈಜ್ಞಾನಿಕ ನಿರ್ಧಾರ. ಶಿಕ್ಷಣದ ಖಾಸಗೀಕರಣವೇ ಸರಕಾರಿ ಶಾಲೆಗಳ ದುಸ್ಥಿತಿಗೆ ಕಾರಣವಾಗಿದೆ. ಶಿಕ್ಷಣದ ವ್ಯಾಪಾರೀಕರಣ ನಿಲ್ಲಿಸದ ಹೊರತು ಸಾರ್ವಜನಿಕ ಶಿಕ್ಷಣ ಉಳಿಯಲು ಅಸಾಧ್ಯ. ಸಂವಿಧಾನದ 21 ಎ ಗೆ ತಿದ್ಧುಪಡಿ ಮಾಡಿ, ಆಯಾ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ನೀಡಿದರೆ ಶಾಶ್ವತ ಪರಿಹಾರ ನೀಡಲು ಸಾಧ್ಯ.
-ಡಾ.ಪಿ.ವಿ.ನಿರಂಜನಾರಾಧ್ಯ, ಶಿಕ್ಷಣ ತಜ್ಞ