ಶಿಕ್ಷಣವು ಮಾದರಿ ಸಮಾಜ ನಿರ್ಮಾಣಕ್ಕೆ ಪೂರಕವಾಗಿರಬೇಕು: ಪ್ರೊ.ಪಿ.ವಿ.ಕೃಷ್ಣ ಭಟ್
ಮಂಗಳೂರು ವಿವಿ 40ನೇ ಸಂಸ್ಥಾಪಣಾ ದಿನಾಚರಣೆ

ಕೊಣಾಜೆ: ಶಿಕ್ಷಣವು ನಮ್ಮಲ್ಲಿ ಉತ್ತಮ ವ್ಯಕ್ತಿತ್ವ, ಮೌಲ್ಯವನ್ನು ಬೆಳೆಸಿ ಮಾದರಿ ಸಮಾಜ ನಿರ್ಮಿಸಲು ಪೂರಕವಾಗಿರಬೇಕು. ಶ್ರೀಮಂತ ಜ್ಞಾನ ಪರಂಪರೆಯನ್ನು ಹೊಂದಿರುವ ಭಾರತದಲ್ಲಿ ಇಲ್ಲಿಯ ವ್ಯಕ್ತಿತ್ವಕ್ಕೆ ಅನುಗುಣವಾಗಿ ವಿಶ್ವವಿದ್ಯಾಲಯಗಳು ನಿರ್ಮಾಣಗೊಳ್ಳಲಿ ಎಂದು ಒಡಿಶಾ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಪಿ.ವಿ.ಕೃಷ್ಣಭಟ್ ಅವರು ಅಭಿಪ್ರಾಯಪಟ್ಟರು.
ಅವರು ಮಂಗಳೂರು ವಿಶ್ವವಿದ್ಯಾಲಯದ ಮಂಗಳ ಸಭಾಂಗಣದಲ್ಲಿ ಗುರುವಾರ ನಡೆದ ವಿವಿಯ 40 ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಭಾರತದ ಯೋಗ, ಕೃಷಿ ಸಂಸ್ಕೃತಿಯ ಬಗ್ಗೆ ಅಮೇರಿಕಾ ಸೇರಿದಂತೆ ಜಗತ್ತಿನ ಬಹಳಷ್ಟು ರಾಷ್ಟ್ರಗಳು ಉತ್ಸುಕರಾಗಿ ಇದನ್ನು ತಮ್ಮ ದೇಶದಲ್ಲೂ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ಸಮಾರಂಭದಲ್ಲಿ ಭಾಗವಹಿಸಿ ಸಂಸ್ಥಾಪನಾ ದಿನಾಚರಣೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಪ್ರೊ.ಎನ್.ಆರ್.ಶೆಟ್ಟಿ ಅವರು, ದಕ್ಷಿಣ ಕನ್ನಡ ಜಿಲ್ಲೆಯು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಪ್ರದೇಶವಾಗಿದೆ. ಇಲ್ಲಿಯ ಸಂಸ್ಕೃತಿ, ಆರಾಧನಾ ಪದ್ದತಿ ವಿಶಿಷ್ಟವಾದುದು. ಅಲ್ಲದೆ ಮಾತೃದೇವಾತಾರಾಧನೆಯು ಇಲ್ಲಿಯ ವಿಶೇಷವಾಗಿದ್ದು ಈ ನಿಟ್ಟಿನಲ್ಲಿ ಹೆಚ್ಚಿನ ಅಧ್ಯಯನಗಳು ನಡೆಯಬೇಕು ಎಂದು ಹೇಳಿದರು.
ಮಂಗಳೂರು ವಿವಿ ಶಿಕ್ಷಣದೊಂದಿಗೆ ಸಂಶೋಧನಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆಯೊಂದಿಗೆ ಮುನ್ನಡೆಯಲಿ ಎಂದು ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ವಹಿಸಿ ಮಾತನಾಡಿದರು.
ಸಮಾರಂಭದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಹನುಮಯ್ಯ ಅವರನ್ನು ವಿಶ್ವವಿದ್ಯಾಲಯದ ಪರವಾಗಿ ಸನ್ಮಾನಿಸಲಾಯಿತು.
ಸಂಸ್ಥಪನಾ ದಿನಾಚರಣೆಯ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಬಿ.ಕೆ.ದೇವರಾಯ, ಜಿ.ಚಿದ್ವಿಲಾಸ್, ಅಭಯ ಸಿಂಹ, ಪ್ರೊ.ಗೋಪಾಲ್ ಮುಗೆರಾಯ, ಪ್ರೊ.ಶಶಿಕಲಾ ಗುರುಪುರ, ಡಾ.ಗಣೇಶ್ ಅಮೀನ್ ಸಂಕಮಾರ್ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎ.ಎಂ.ಖಾನ್, ಹಣಕಾಸು ಅಧಿಕಾರಿ ಪ್ರೊ.ಶ್ರೀಪತಿ ಕಲ್ಲೂರಾಯ, ಹಣಕಾಸು ಅಧಿಕಾರಿ ಪ್ರೊ.ರವೀಂದ್ರಾಚಾರಿ, ಕಾರ್ಯಕ್ರಮ ಸಂಯೋಜಕಾರಾದ ಪ್ರೊ.ಶಿವಲಿಂಗಯ್ಯ ಅವರು ಉಪಸ್ಥಿತರಿದ್ದರು.
ಪ್ರಾಧ್ಯಾಪಕರಾದ ಪ್ರೊ.ರವಿಶಂಕರ್‍ರಾವ್ ಹಾಗೂ ಡಾ.ಧನಂಜಯ ಕುಂಬ್ಳೆ ಅವರು ಕಾರ್ಯಕ್ರಮ ನಿರೂಪಿಸಿದರು.







