ಉಡುಪಿ: ಸೆ.14ರಂದು ಬ್ರೈನ್‌ಕ್ವೆಸ್ಟ್
ಉಡುಪಿ, ಸೆ.12: ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಕುರಿತು ಕುತೂಹಲ, ಹೊಸ ಸಂಶೋಧನೆಗಳ ಕುರಿತು ಆಸಕ್ತಿ ಮೂಡಿಸುವ ಸಲುವಾಗಿ ಕಳೆದ 15 ವರ್ಷಗಳಿಂದ ಈ-ಸ್ಕೂಲ್ ಮೂಲಕ ನಡೆಸಿಕೊಂಡು ಬರುತ್ತಿರುವ ಬ್ರೈನ್‌ಕ್ವೆಸ್ಟ್ ಈ ಬಾರಿ ಸೆ.14ರಂದು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ ಎಂದು ಈ-ಸ್ಕೂಲ್ ನಿರ್ದೇಶಕಿ ಡಾ.ಪೂರ್ಣಿಮಾ ಕಾಮತ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರೈನ್‌ಕ್ವೆಸ್ಟ್‌ನ್ನು ಕೊನೆಯ ಬಾರಿಗೆ ನಡೆಸುತಿದ್ದು, ಮುಂದೆ ಇದು ಬೇರೆ ಬೇರೆ ರೂಪದಲ್ಲಿ ನಡೆಯಬಹುದು ಎಂದರು. ಆನ್‌ಲೈನ್‌ನಲ್ಲಿ 'ಸಿಟಿಝನ್ ಸಾಯನ್ಸ್' ಎಂಬ ನೂತನ ಕಾರ್ಯಕ್ರಮವನ್ನು ಪ್ರಾರಂಭಿಸುವ ಯೋಜನೆ ಇದೆ ಎಂದು ಕಾಮತ್ ನುಡಿದರು.
ಈ ಬಾರಿಯ ಬ್ರೈನ್‌ಕ್ವೆಸ್ಟ್‌ನಲ್ಲಿ ವಿದ್ಯಾರ್ಥಿಗಳು ಬಾವಿಯ ಕುಡಿಯುವ ನೀರು ಯಾವ ರೀತಿಯಲ್ಲಿ ಮಾಲಿನ್ಯಗೊಳ್ಳುತ್ತದೆ ಎಂಬ ಬಗ್ಗೆ ಪ್ರಯೋಗಗಳ ಮೂಲಕ ತಾವು ಕಂಡು ಹಿಡಿದುದನ್ನು ವಿವರಿಸಲಿದ್ದಾರೆ. ಅದೇ ರೀತಿ ಗ್ರೀನ್‌ಹೌಸ್ ಅನಿಲಗಳು ಗಿಡಗಳ ಬೆಳವಣಿಗೆಯಲ್ಲಿ ಯಾವ ರೀತಿ ಪರಿಣಾಮಬೀರುತ್ತವೆ ಎಂಬುದನ್ನು ವಿವರಿಸಲಿದ್ದಾರೆ ಎಂದರು.
ಅದೇ ರೀತಿ ಮಾಡೆಲ್ ಕ್ವೆಸ್ಟ್‌ನಲ್ಲಿ ವಿದ್ಯಾರ್ಥಿಗಳು ಮಣ್ಣು ಹೀರಿಕೊಳ್ಳುವ ನೀರನ್ನು ಅಳೆಯುವ 'ಮೊಯಿಶ್ಚರ್ ಮೀಟರ್'ನ್ನು ಪ್ರದರ್ಶಿಸಲಿದ್ದಾರೆ. ಈ ಬಾರಿ 10 ಶಾಲೆಗಳ ವಿದ್ಯಾರ್ಥಿಗಳು ಬ್ರೈನ್‌ಕ್ವೆಸ್ಟ್ ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದೂ ಅವರು ಹೇಳಿದರು.
ಅಮೆರಿಕದಲ್ಲಿರುವ ತಾನು ಪ್ರತಿ ವರ್ಷ ಹುಟ್ಟೂರು ಉಡುಪಿಗೆ ಬಂದು ನಡೆಸುತ್ತಿರುವ ಬ್ರೈನ್‌ಕ್ವೆಸ್ಟ್‌ನಲ್ಲಿ ಈವರೆಗೆ ಕೇವಲ ಮೂರು ಶಾಲೆಗಳು ಮಾತ್ರ ಪ್ರತಿಬಾರಿಯೂ ತಪ್ಪದೇ ಭಾಗವಹಿಸುತ್ತಿವೆ. ಇವುಗಳೆಂದರೆ ಬ್ರಹ್ಮಾವರದ ಲಿಟ್ಲ್‌ರಾಕ್, ಹಿರಿಯಡಕದ ಗ್ರೀನ್‌ಪಾರ್ಕ್ ಹಾಗೂ ಉಡುಪಿಯ ಅನಂತೇಶ್ವರ ಆಂಗ್ಲ ಮಾಧ್ಯಮ ಶಾಲೆ. ಈ ವಿದ್ಯಾಸಂಸ್ಥೆಗಳ ಮುಖ್ಯಸ್ಥರಿಗೆ ತಾವು ಕೃತಜ್ಞತೆ ಸಲ್ಲಿಸುವುದಾಗಿ ಅವರು ಹೇಳಿದರು.







