ಸೌರವ್ಯೂಹದ ಹೊರಗಿನ ಭೂಮಿಯಂಥ ಗ್ರಹದಲ್ಲಿ ನೀರು ಪತ್ತೆ
ಲಂಡನ್, ಸೆ. 12: ನಮ್ಮ ಸೌರವ್ಯೂಹದಿಂದ ತುಂಬಾ ದೂರದಲ್ಲಿರುವ ನಕ್ಷತ್ರವೊಂದರ ಸುತ್ತ ತಿರುಗುವ ಗ್ರಹವೊಂದರ ವಾತಾವರಣದಲ್ಲಿ ನೀರಿರುವುದನ್ನು ಖಗೋಳ ವಿಜ್ಞಾನಿಗಳು ಮೊದಲ ಬಾರಿಗೆ ಪತ್ತೆಹಚ್ಚಿದ್ದಾರೆ.
ಭೂಮಿಯ ದ್ರವ್ಯರಾಶಿಗಿಂತ 8 ಪಟ್ಟು ಅಧಿಕ ದ್ರವ್ಯರಾಶಿ ಹೊಂದಿರುವ ಕೆ2-18ಬಿ ಎಂಬ ಗ್ರಹದಲ್ಲಿ ಭೂಮಿಯಲ್ಲಿರುವಂಥ ಉಷ್ಣತೆಯಿದ್ದು, ಜೀವರಾಶಿಯನ್ನು ಪೋಷಿಸಬಹುದಾಗಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ನೀರು ಮತ್ತು ವಾಸಯೋಗ್ಯ ಉಷ್ಣತೆ ಎರಡನ್ನೂ ಹೊಂದಿರುವ, ಸೌರಮಂಡಲದ ಹೊರಗಿನ ಏಕೈಕ ಗ್ರಹ ಇದಾಗಿದೆ ಎಂದು ‘ನೇಚರ್ ಆ್ಯಸ್ಟ್ರೋನಮಿ’ ಪತ್ರಿಕೆಯಲ್ಲಿ ಪ್ರಕಟಗೊಂಡ ಅಧ್ಯಯನ ವರದಿಯೊಂದು ಹೇಳಿದೆ.
ಈ ಗ್ರಹವು ತಣ್ಣಗಿನ ಕುಬ್ಜ ನಕ್ಷತ್ರ ಕೆ2-18ರ ಸುತ್ತ ಸುತ್ತುತ್ತಿದೆ. ಈ ನಕ್ಷತ್ರವು ಭೂಮಿಯಿಂದ ಸುಮಾರು 110 ಬೆಳಕಿನ ವರ್ಷ (ಒಂದು ಬೆಳಕಿನ ವರ್ಷ ಎಂದರೆ ಸೂರ್ಯ ಕಿರಣವೊಂದು ಒಂದು ವರ್ಷದ ಅವಧಿಯಲ್ಲಿ ಕ್ರಮಿಸುವಷ್ಟು ದೂರ. ಬೆಳಕಿನ ವೇಗ ಸೆಕೆಂಡ್‌ಗೆ 2,99,792 ಕಿ.ಮೀ. ಒಂದು ವೇಳೆ, ನಿಮಗೆ ಬೆಳಕಿನ ವೇಗದಲ್ಲಿ ಚಲಿಸಲು ಸಾಧ್ಯವಾದರೆ, ನೀವು ಒಂದು ಸೆಕೆಂಡ್‌ನಲ್ಲಿ ಭೂಮಿಗೆ 7.5 ಬಾರಿ ಸುತ್ತು ಬರಬಹುದು!) ಗಳಷ್ಟು ದೂರದಲ್ಲಿ ‘ಲಿಯೊ’ ನಕ್ಷತ್ರಪುಂಜದಲ್ಲಿದೆ ಎಂಬ ನಿರ್ಧಾರಕ್ಕೆ ಖಗೋಳ ವಿಜ್ಞಾನಿಗಳು ಬಂದಿದ್ದಾರೆ. ಇದಕ್ಕಾಗಿ ಅವರು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಮತ್ತು ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ)ಯ ಹಬಲ್ ಬಾಹ್ಯಾಕಾಶ ದೂರದರ್ಶಕದಿಂದ ಪಡೆದ ದತ್ತಾಂಶಗಳನ್ನು ಅಧ್ಯಯನ ಮಾಡಿದ್ದಾರೆ.