ಕೊಡಗಿನಲ್ಲಿ ಮಳೆ ಕಡಿಮೆ: ಮಡಿಕೇರಿ, ಸೋಮವಾರಪೇಟೆ ರಸ್ತೆ ಸಂಚಾರಕ್ಕೆ ಮುಕ್ತ

ಮಡಿಕೇರಿ, ಸೆ.12: ಕೊಡಗು ಜಿಲ್ಲೆಯ ಹಲವೆಡೆಗಳಲ್ಲಿ ಮಳೆಯ ಬಿರುಸು ಹೆಚ್ಚಾಗಿ ಜನಜೀವನಕ್ಕೆ ತೊಡಕನ್ನುಂಟುಮಾಡಿದ್ದು, ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಯ ಸಂದರ್ಭ ಮಡಿಕೇರಿ-ಸೋಮವಾರಪೇಟೆ ರಸ್ತೆಯ ಹಾಲೇರಿಯಲ್ಲಿ ಬರೆ ಕುಸಿತದಿಂದ ಸಂಪರ್ಕ ಕಡಿತಗೊಂಡ ಘಟನೆ ನಡೆಯಿತು.
ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ಆಗೊಮ್ಮೆ ಈಗೊಮ್ಮೆ ಸುರಿಯುತ್ತಿರುವ ಧಾರಾಕಾರ ಮಳೆ ಆತಂಕವನ್ನೂ ಹುಟ್ಟು ಹಾಕುತ್ತಿದೆ. ಬುಧವಾರದಂದು ಮಳೆಯ ಪ್ರಮಾಣ ಇಳಿಮುಖವಾಗಿತ್ತಾದರೂ, ರಾತ್ರಿಯ ಅವಧಿಯಲ್ಲಿ ನಿರಂತರವಾಗಿ ಮಳೆ ಸುರಿಯಲಾರಂಭಿಸಿತು. ಇದರ ಪರಿಣಾಮ ಮಾದಾಪುರ ಬಳಿಯ ಹಾಲೇರಿ ಗ್ರಾಮದ ರಸ್ತೆಯ ಮೇಲೆ ಭಾರೀ ಪ್ರಮಾಣದಲ್ಲಿ ಮರಗಳ ಸಹಿತ ಬರೆಯ ಮಣ್ಣು ಕುಸಿದು ವಾಹನ ಸಂಚಾರ ಸ್ಥಗಿತಗೊಂಡಿತ್ತು. ಗುರುವಾರ ಬೆಳಗ್ಗೆ ಮಣ್ಣು ಮತ್ತು ಬಿದ್ದ ಮರವನ್ನು ತೆರವುಗೊಳಿಸುವುದರೊಂದಿಗೆ ಸಂಚಾರ ಸುಗಮ ಗೊಂಡಿತು.
ಜಿಲ್ಲಾ ಕೇಂದ್ರ ಮಡಿಕೇರಿ ವ್ಯಾಪ್ತಿಯಲ್ಲಿ ಇಂದು ದಿನಪೂರ್ತಿ ಹನಿಮಳೆಯೊಂದಿಗೆ ಬಿರುಮಳೆಯೂ ಕಾಣಿಸಿಕೊಂಡು ಸಂಚಾರಕ್ಕೆ ತೊಡಕುಂಟಾಗಿತ್ತು. ಕಳೆದ ಒಂದು ದಿನದ ಅವಧಿಯಲ್ಲಿ ಮಡಿಕೇರಿ ವ್ಯಾಪ್ತಿಯಲ್ಲಿ ಒಂದು ಇಂಚಿಗೂ ಹೆಚ್ಚಿನ ಮಳೆ ದಾಖಲಾಗಿದೆ.
ಕಾವೇರಿಯ ಕ್ಷೇತ್ರ ತಲಕಾವೇರಿ ಮತ್ತು ಭಾಗಮಂಡಲ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ಇಪ್ಪತ್ತನಾಲ್ಕು ಗಂಟೆಗಳ ಅವಧಿಯಲ್ಲಿ 2 ಇಂಚಿನಷ್ಟು ಮಳೆಯಾಗಿದ್ದರೆ, ಕಾವೇರಿ ನದಿ ಪಾತ್ರದ ನಾಪೋಕ್ಲು, ಮೂರ್ನಾಡು ಬಲಮುರಿ, ಸಿದ್ದಾಪುರ, ಕುಶಾಲನಗರ ವಿಭಾಗಗಳಲ್ಲಿ ಹನಿ ಮಳೆಯಷ್ಟೆ ಆಗಿರುವ ಬಗ್ಗೆ ವರದಿಯಾಗಿದೆ. ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗುತ್ತಿದೆ.









