ಕುತೂಹಲ ಮೂಡಿಸಿದ ಅನರ್ಹ ಶಾಸಕರ ದಿಢೀರ್ ಸಭೆ

ಬೆಂಗಳೂರು, ಸೆ. 13: ಮೈತ್ರಿ ಸರಕಾರ ಪತನಕ್ಕೆ ಕಾರಣರಾದ ಅನರ್ಹ ಶಾಸಕರ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರಿಂ ಕೋರ್ಟ್ ನಿರಾಕರಿಸಿರುವ ಹಿನ್ನೆಲೆಯಲ್ಲಿ ಅನರ್ಹ ಶಾಸಕರು ಒಂದೆಡೆ ಸೇರಿ ಸಮಾಲೋಚನೆ ನಡೆಸಿರುವುದು ರಾಜಕೀಯ ಕುತೂಹಲ ಸೃಷ್ಟಿಸಿದೆ.
ಶುಕ್ರವಾರ ಅನರ್ಹ ಶಾಸಕ ಡಾ.ಕೆ.ಸುಧಾಕರ್ ಅವರ ನಿವಾಸದಲ್ಲಿ ಸಭೆ ನಡೆಸಿದ ಬಿ.ಸಿ.ಪಾಟೀಲ್, ಎಂ.ಟಿ.ಬಿ.ನಾಗರಾಜ್, ಮುನಿರತ್ನ, ಬೈರತಿ ಬಸವರಾಜು, ಆರ್.ರೋಷನ್ ಬೇಗ್, ಪ್ರತಾಪ್ ಗೌಡ ಪಾಟೀಲ್, ತಮ್ಮ ಮುಂದಿನ ನಡೆ ಏನು ಎಂಬ ಬಗ್ಗೆ ಚರ್ಚಿಸಿದ್ದಾರೆಂದು ತಿಳಿದು ಬಂದಿದೆ.
ಆತಂಕವಿಲ್ಲ: ಶಾಸಕ ಸ್ಥಾನ ಹೋಗಿದೆ ಎಂದು ನಮಗೇನು ಆತಂಕವಿಲ್ಲ. ನಮ್ಮ ಜೀವನವೇ ಮುಗಿದು ಹೋಗಿದೆ ಎಂದು ನಾವೇನು ಭಾವಿಸಿಲ್ಲ. ನಾವೆಲ್ಲರೂ ಆರಾಮಾಗಿಯೇ ಇದ್ದೇವೆ. ಸ್ಪೀಕರ್ ನಮಗೆ ದ್ರೋಹ ಮಾಡಿದ್ದು ಕೋರ್ಟ್ನಲ್ಲಿ ನ್ಯಾಯ ದೊರೆಯುವ ವಿಶ್ವಾಸವಿದೆ ಎಂದು ಹಿರೇಕೆರೂರು ಕ್ಷೇತ್ರದ ಅನರ್ಹ ಶಾಸಕ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
ನಮ್ಮ ಅರ್ಜಿ ವಿಚಾರಣೆಗೆ ವಿಳಂಬ ಆಗುತ್ತಿದ್ದು, ನಮ್ಮ ಮುಂದಿನ ನಡೆಯ ಬಗ್ಗೆ ನಾವೆಲ್ಲರೂ ಸೇರಿ ಚರ್ಚಿಸಿದ್ದೇವೆ. ಜತೆಗೆ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದೇವೆ ಎಂದು ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು.
ಅಂದಿನ ಸ್ಪೀಕರ್ ಕೆ.ಆರ್.ರಮೇಶ್ಕುಮಾರ್ ಅವರು ಕಾಂಗ್ರೆಸಿನ 13 ಮತ್ತು ಜೆಡಿಎಸ್ನ 3 ಹಾಗೂ ಓರ್ವ ಪಕ್ಷೇತರ ಶಾಸಕ ಸೇರಿದಂತೆ ಒಟ್ಟು 17 ಮಂದಿ ಶಾಸಕರನ್ನು ಅನರ್ಹಗೊಳಿಸಿದ್ದರು. ಹೀಗಾಗಿ ಸ್ಪೀಕರ್ ನಿರ್ಧಾರವನ್ನು ಪ್ರಶ್ನಿಸಿ 17 ಮಂದಿ ಅನರ್ಹ ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
‘ನಾವು ಪ್ರತಿನಿಧಿಸುವ ತಾಲೂಕಿನ ಅಭಿವೃದ್ಧಿ, ಕ್ಷೇತ್ರದ ಅಭಿವೃದ್ಧಿ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ನಾವೆಲ್ಲರೂ ಸೇರಿ ಚರ್ಚಿಸಿದ್ದೇವೆ. ಬಿಜೆಪಿಯ ಬಗ್ಗೆ ಸದ್ಯಕ್ಕೆ ನಮಗೆ ಯಾವುದೇ ಅಸಮಾಧಾನವಿಲ್ಲ’
-ಎಂ.ಟಿ.ಬಿ.ನಾಗರಾಜ್, ಅನರ್ಹ ಶಾಸಕ