ರಸ್ತೆ ಗುಂಡಿ ಮುಚ್ಚಿರುವ ಮಾಹಿತಿ ಬಿಬಿಎಂಪಿಯಲ್ಲೇ ಇಲ್ಲ !

ಬೆಂಗಳೂರು, ಸೆ.13: ರಾಜಧಾನಿಯ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಬಿಬಿಎಂಪಿಗೆ ಹೈಕೋರ್ಟ್ ಆದೇಶ ನೀಡಿದ ಮೇಲೆ ಇಲ್ಲಿಯವರೆಗೂ ಎಷ್ಟು ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಮಾಹಿತಿ ಪಾಲಿಕೆ ಬಳಿಯೇ ಇಲ್ಲವಾಗಿದೆ.
ನಗರದ ಪ್ರಮುಖ ರಸ್ತೆಗಳಲ್ಲಿ ಮತ್ತೆ ಗುಂಡಿಗಳು ಕಾಣಿಸಿದ್ದು, ವಾಹನ ಸವಾರರು ಮತ್ತೆ ತೊಂದರೆ ಎದುರಿಸುವಂತಾಗಿದೆ. ಬಿಬಿಎಂಪಿ ತರಾತುರಿಯಲ್ಲಿ ರಸ್ತೆ ಗುಂಡಿ ಮುಚ್ಚುವ ಭರದಲ್ಲಿ ಗುಣಮಟ್ಟ ಕಾಯ್ದುಕೊಂಡಿಲ್ಲ ಎಂಬ ಆರೋಪವೂ ಕೇಳಿದೆ. ಬಿಬಿಎಂಪಿ ವ್ಯಾಪ್ತಿಯ 401ಕಿ.ಮೀ. ಉದ್ದದ ರಸ್ತೆಯಲ್ಲಿ ಗುಂಡಿಗಳಿವೆ ಎಂದು ಇತ್ತೀಚೆಗೆ ಹೈಕೋರ್ಟ್‌ಗೆ ಬಿಬಿಎಂಪಿ ಮಾಹಿತಿ ನೀಡಿತ್ತು. ಆದರೆ ಬಿಬಿಎಂಪಿ ಈವರೆಗೂ ಎಷ್ಟು ಗುಂಡಿ ಮುಚ್ಚಲಾಗಿದೆ ಎಂಬ ಅಂಕಿ- ಅಂಶಗಳನ್ನು ಬಹಿರಂಗಗೊಳಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ನಗರದಲ್ಲಿರುವ ಎಲ್ಲ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಹೇಳುತ್ತಿರುವ ಬಿಬಿಎಂಪಿ ವಿರುದ್ಧ ಕಳಪೆ ಕಾಮಗಾರಿಯ ಆರೋಪಗಳು ಕೇಳಿಬರುತ್ತಿವೆ. ಈ ಸಂಬಂಧ ರಸ್ತೆ ಗುಂಡಿಗಳು ಹೆಚ್ಚಿವೆ ಎಂಬ ದೂರುಗಳು ಬಂದಿವೆ. ಅಲ್ಲದೆ ಬಿಬಿಎಂಪಿ ರಸ್ತೆ ಗುಂಡಿಗಳನ್ನು ಮುಚ್ಚಿದ ಬಳಿಕ, ಕಾಮಗಾರಿ ಗುಣಮಟ್ಟದ್ದಾಗಿದೆಯೇ ಎಂದು ಪರಿಶೀಲನೆ ಕೂಡ ನಡೆಸುತ್ತಿಲ್ಲ. ಹೀಗಾಗಿ ರಸ್ತೆಗುಂಡಿಗಳು ಮತ್ತೆ ಯಥಾಸ್ಥಿತಿಗೆ ತಲುಪಿವೆ. ಇದರಿಂದಾಗಿ ಸಾರ್ವಜನಿಕರು ಧೂಳು, ಗುಂಡಿಗಳಿಂದಾಗಿ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ.
ಬಿಬಿಎಂಪಿಯ ವ್ಯಾಪ್ತಿಯಲ್ಲಿ 470 ಪ್ರಮುಖ ರಸ್ತೆಗಳಿದ್ದು, 1,344.84 ಕಿ.ಮೀ ಉದ್ದವಿದೆ. ಇದರಲ್ಲಿ 401 ಕಿ.ಮೀ ಉದ್ದದ 108 ರಸ್ತೆಗಳು ರಸ್ತೆಗುಂಡಿಗಳಿಂದ ಕೂಡಿವೆ. 106.68 ಕಿ.ಮೀ ರಸ್ತೆಯಲ್ಲಿ ಬೆಸ್ಕಾಂ, ಗೇಲ್, ಜಲಮಂಡಳಿ ಹಾಗೂ ಕೆಪಿಟಿಸಿಎಲ್ ಸಂಸ್ಥೆಗಳು ವಿವಿಧ ಅಭಿವೃದ್ಧಿ ಕಾರಣಕ್ಕಾಗಿ ರಸ್ತೆಗಳನ್ನು ಅಗೆದಿವೆ. ಇನ್ನು 943.74 ಕಿ.ಮೀ ರಸ್ತೆಗಳು ಗುಂಡಿ ಮುಕ್ತವಾಗಿವೆ ಎಂದು ಪಾಲಿಕೆ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಬಿಬಿಎಂಪಿಯ ಅಧಿಕೃತ ವೆಬ್‌ಸೈಟ್ ಪ್ರಕಾರ ಮಹದೇವಪುರ ಹಾಗೂ ಯಲಹಂಕ ವಲಯದಲ್ಲಿ ಒಂದೇ ಒಂದು ರಸ್ತೆಗುಂಡಿ ಇಲ್ಲ ಎಂದು ಪ್ರಕಟಿಸಲಾಗಿದೆ. ಆದರೆ, ವೆಬ್‌ಸೈಟ್‌ನಲ್ಲಿರುವುದು ಕಳೆದ ವರ್ಷದ ರಸ್ತೆಗುಂಡಿಗಳ ವಿವರ. ದಕ್ಷಿಣ ವಲಯದಲ್ಲಿ ನವೆಂಬರ್ 2, ದಾಸರಹಳ್ಳಿ ಹಾಗೂ ಆರ್‌ಆರ್ ನಗರದಲ್ಲಿ ಅಕ್ಟೋಬರ್ 26, ಬೊಮ್ಮನಹಳ್ಳಿಯಲ್ಲಿ ನವೆಂಬರ್ 2ರವರೆಗಿನ ರಸ್ತೆಗುಂಡಿಗಳ ವಿವರ ಮಾತ್ರ ಇದೆ. ಅದೇ ರೀತಿ ಯಲಹಂಕ ಮತ್ತು ಮಹದೇವಪುರದಲ್ಲಿ ರಸ್ತೆಗುಂಡಿಗಳೇ ಇಲ್ಲ ಎಂದು ಕ್ಲೀನ್‌ಚಿಟ್ ನೀಡಿದೆ. ಬಿಬಿಎಂಪಿಯ ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಕೇವಲ ದೂರು ದಾಖಲಿಸಿಕೊಳ್ಳುವುದಕ್ಕಷ್ಟೇ ಸೀಮಿತವಾಗಿದೆ. ದೂರು ದಾಖಲಿಸಿದರೂ ಬಿಬಿಎಂಪಿ ರಸ್ತೆಗುಂಡಿಗಳನ್ನು ಮುಚ್ಚುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಬಿಬಿಎಂಪಿ ವೆಬ್‌ಸೈಟ್ ಮಾಹಿತಿ ಹಳೆಯದು
ರಸ್ತೆ ಗುಂಡಿಗಳನ್ನು ಮುಚ್ಚಿರುವುದರ ಕುರಿತು ಅಧಿಕಾರಿಗಳನ್ನು ವಿಚಾರಿಸಿದರೆ ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಮಾಹಿತಿಯಿದೆ ಎಂದು ಹೇಳಿ ಕೈತೊಳೆದುಕೊಳ್ಳುತ್ತಾರೆ. ಆದರೆ ವೆಬ್‌ಸೈಟ್‌ನಲ್ಲಿ ಹಳೆಯ ಅಂಕಿ ಅಂಶ ಹಾಕಿದ್ದು, ಇದೇ ವರ್ಷದ ಮಾಹಿತಿ ಎಂದು ಬಿಂಬಿಸಿದೆ. ಜತೆಗೆ ಕೆಲವು ವಲಯಗಳ ರಸ್ತೆಗಳಲ್ಲಿ ಗುಂಡಿಗಳೇ ಇಲ್ಲ ಎಂದು ಮಾಹಿತಿಯಿದೆ.