ಉಡುಪಿ: ದಕ್ಷಿಣ ವಲಯ ಕಿರಿಯರ ಕ್ರೀಡಾಕೂಟಕ್ಕೆ ಚಾಲನೆ

ಉಡುಪಿ, ಸೆ.13: ಉಡುಪಿ ಜಿಲ್ಲಾ ಅಮೆಚೂರು ಅಥ್ಲೆಟಿಕ್ ಅಸೋಸಿಯೇಷನ್, ಜಿಲ್ಲಾ ಯುವಜನ ಸೇವಾ ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ಮೂರು ದಿನಗಳ ಕಾಲ ಆಯೋಜಿಸಿರುವ ದಕ್ಷಿಣ ವಲಯ ಕಿರಿಯರ ಕ್ರೀಡಾಕೂಟಕ್ಕೆ ಇಂದು ಸಂಜೆ ನಗರದ ಅಜ್ಜರಕಾಡಿ ನಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ಅಧಿಕೃತ ಚಾಲನೆ ನೀಡಲಾಯಿತು.
ಬಣ್ಣ ಬಣ್ಣದ ಬೆಲೂನನ್ನು ಆಕಾಶದಲ್ಲಿ ಹಾರಿಬಿಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ದೊರೆಯಿತು. ದಕ್ಷಿಣ ವಲಯದ ಎಂಟು ರಾಜ್ಯಗಳು -ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಮ, ಕೇರಳ, ತಮಿಳುನಾಡು, ಲಕ್ಷದ್ವೀಪ, ಅಂಡಮಾನ್ ನಿಕೋಬಾರ್ ಮತ್ತು ಪಾಂಡಿಚೇರಿ- ರಾಜ್ಯಗಳ 1200ಕ್ಕೂ ಅಧಿಕ ಕ್ರೀಡಾಪಟುಗಳು ಈ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ.
ನಿಟ್ಟೆಯ ವಿಶಾಲ್ ಹೆಗ್ಡೆ, ಜಯಕರ ಶೆಟ್ಟಿ ಇಂದ್ರಾಳಿ, ಅಥ್ಲೀಟ್ ಅಶ್ವಿನಿ ಅಕ್ಕುಂಜಿ, ಎ.ರಘುರಾಮ ನಾಯಕ್, ಬಾಲಕೃಷ್ಣ ಹೆಗ್ಡೆ, ಮಹೇಶ್ ಠಾಕೂರ್ ಹಾಗೂ ಇತರರು ಈ ಂದರ್ಭದಲ್ಲಿ ಉಪಸ್ಥಿತರಿದ್ದರು.
ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಅವರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಪಂ, ತಾಪಂಗಳ ಸದಸ್ಯರು, ನಗರಸಭೆಯ ಸದಸ್ಯರು, ಅಥ್ಲೆಟಿಕ್ ಸಂಘ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್‌ನ ಅಶೋಕ್ ಅಡ್ಯಂತಾಯ ಅವರು ಅತಿಥಿಗಳನ್ನು ಸ್ವಾಗತಿಸಿದರೆ, ಸಂಘಟನಾ ಸಮಿತಿಯ ಅಧ್ಯಕ್ಷ ಶಾಸಕ ಕೆ.ರಘುಪತಿ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಇದಕ್ಕೆ ಮುನ್ನ ಜೋಡುಕಟ್ಟೆಯಿಂದ ಮೈದಾನದವರೆಗ ಭವ್ಯ ಮೆರವಣಿಗೆ ನಡೆಯಿತು.
ಕ್ರೀಡಾಕೂಟದ ಸ್ಪರ್ಧೆಗಳು ನಾಳೆ ಬೆಳಗ್ಗೆ ಪ್ರಾರಂಭಗೊಳ್ಳಲಿವೆ. ಒಟ್ಟು ಎಂಟು ವಿಭಾಗಗಳಲ್ಲಿ 130 ಸ್ಪರ್ಧೆಗಳು ಮುಂದಿನ ಎರಡು ದಿನಗಳ ಕಾಲ ನಡೆಯಲಿವೆ. ಸೆ.15ರ ಸಂಜೆ ಕ್ರೀಡಾಕೂಟದ ಸಮಾರೋಪ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ.









