ಸೆ.15ರಂದು ತುಳುಕೂಟದಿಂದ ಪಣಿಯಾಡಿ ಕಾದಂಬರಿ ಪ್ರಶಸ್ತಿ ಪ್ರದಾನ
ಉಡುಪಿ, ಸೆ.13: ತುಳುಕೂಟ ಉಡುಪಿ ವತಿಯಿಂದ ನೀಡಲಾಗುವ 25ನೇ ವರ್ಷದ ಪಣಿಯಾಡಿ ಕಾದಂಬರಿ ಪ್ರಶಸ್ತಿ ಪ್ರದಾನ ಹಾಗೂ 7ನೇ ವರ್ಷದ ಮಲ್ಪೆ ರಾಮದಾಸ ಸಾಮಗ ಪ್ರಶಸ್ತಿ ಪ್ರದಾನ ಸಮಾರಂಭ ಸೆ.15ರಂದು ಅಪರಾಹ್ನ 3:30ಕ್ಕೆ ಉಡುಪಿ ಹೊಟೇಲ್ ಕಿದಿಯೂರಿನ ಪವನ್ ರೂಫ್‌ಟಾಪ್‌ನಲ್ಲಿ ನಡೆಯಲಿದೆ ಎಂದು ತುಳುಕೂಟ ಉಡುಪಿ ಇದರ ಅಧ್ಯಕ್ಷ ವಿ.ಜಿ.ಶೆಟ್ಟಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 25ನೇ ಎಸ್.ಯು.ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿಯನ್ನು ಯುವ ಸಾಹಿತಿಗಳಾದ ಅಕ್ಷತರಾಜ್ ಪೆರ್ಲ ಇವರ ‘ಬೊಳ್ಳಿ’ ಹಾಗೂ ರಾಜಶ್ರೀ ಟಿ.ರೈ ಅವರ ‘ಚೌಕಿ’ ಕಾದಂಬರಿ ಹಂಚಿಕೊಂಡಿದೆ. ಅದೇ ರೀತಿ ಮಲ್ಪೆ ರಾಮದಾಸ ಸಾಮಗ ಪ್ರಶಸ್ತಿಗೆ ಹಿರಿಯ ಯಕ್ಷಗಾನ ಭಾಗವತ ದಿನೇಶ್ ಅಮ್ಮಣ್ಣಾಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಹಂಪಿ ಕನ್ನಡ ವಿವಿಯ ವಿಶ್ರಾಂತ ಕುಲಪತಿ ಹಾಗೂ ತುಳು ವಿದ್ವಾಂಸ ಪ್ರೊ.ಬಿ.ಎ.ವಿವೇಕ ರೈ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ಉದ್ಯಮಿಗಳಾದ ಭುವನೇಂದ್ರ ಕಿದಿಯೂರು, ಪುರುಷೋತ್ತಮ ಶೆಟ್ಟಿ, ಯು. ವಿಶ್ವನಾಥ ಶೆಣೈ ಭಾಗವಹಿಸಲಿದ್ದಾರೆ ಎಂದರು.
ಅಪರಾಹ್ನ 2:30ಕ್ಕೆ ದಿನೇಶ್ ಅಮ್ಮಣ್ಣಾಯ ಬಳಗದಿಂದ ಕಾಡಮಲ್ಲಿಗೆ, ಕೋಟಿ ಚೆನ್ನಯ್ಯ, ಗೆಜ್ಜೆಪೂಜೆ ಪ್ರಸಂಗಗಳ ಯಕ್ಷಗಾನ ನಾಟ್ಯ ವೈಭವ ಕಾರ್ಯಕ್ರಮ ನಡೆಯಲಿದೆ ಎಂದವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತುಳುಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರು, ತಾರಾ ಆಚಾರ್ಯ, ಚೈತನ್ಯ ಎಂ.ಜಿ., ಪ್ರಕಾಶ್ ಸುವರ್ಣ ಉಪಸ್ಥಿತರಿದ್ದರು.
400 ಮಂದಿಯಿಂದ ತುಳು ಕಲಿಕೆ
ಉಡುಪಿ ಆಸುಪಾಸಿನ ಆರು ಪ್ರೌಢ ಶಾಲೆಗಳ (8ರಿಂದ 10ನೇ ತರಗತಿ) 400 ಮಂದಿ ವಿದ್ಯಾರ್ಥಿಗಳು ಮೂರನೇ ಭಾಷೆಯಾಗಿ ತುಳುವನ್ನು ಕಲಿಯು ತಿದ್ದಾರೆ. ಅಲ್ಲದೇ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇಧಕ್ಕೆ ಸೇರಿಸುವ ಕುರಿತಂತೆ ಮತ್ತೆ ಹೋರಾಟ ಪ್ರಾರಂಭ ಗೊಂಡಿದ್ದು ತೀವ್ರಗತಿ ಪಡೆಯುತ್ತಿದೆ ಎಂದು ವಿ.ಜಿ.ಶೆಟ್ಟಿ ತಿಳಿಸಿದರು.
ಕಳೆದ ಎಪ್ರಿಲ್ ತಿಂಗಳಲ್ಲಿ ನಡೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ ತುಳುವನ್ನು ತೃತೀಯ ಭಾಷೆಯಾಗಿ ತೆಗೆದುಕೊಂಡ ಇಬ್ಬರು (ಎಂಜೆಸಿ ಮಣಿಪಾಲ, ಉಚ್ಚಿಲ) ವಿದ್ಯಾರ್ಥಿಗಳು ತಲಾ 100 ಅಂಕಗಳನ್ನು ಪಡೆದಿದ್ದು, ಇವರಿಬ್ಬರಿಗೂ ತುಳುಕೂಟದ ಅಧ್ಯಕ್ಷ ಡಾ.ಭಾಸ್ಕರಾನಂದ ಕುಮಾರ್ ತಲಾ 5000ರೂ.ವನ್ನು ಪ್ರೋತ್ಸಾಹಧನವಾಗಿ ನೀಡಿದ್ದಾರೆ. ಅದೇ ರೀತಿ 17 ಮಂದಿ ವಿದ್ಯಾರ್ಥಿಗಳು 95ಕ್ಕಿಂತ ಅಧಿಕ ಅಂಕ ಪಡೆದಿದ್ದು, ಅವರಿಗೂ ತಲಾ ಒಂದು ಸಾವಿ ರೂ.ವನ್ನು ನೀಡಲಾಗಿದೆ ಎಂದರು.
ಜಿಲ್ಲೆಯ ಇನ್ನಷ್ಟು ಶಾಲೆಯಲ್ಲಿ ತುಳುವನ್ನು ತೃತೀಯ ಭಾಷೆಯಾಗಿ ಕಲಿಸುವ ಬಗ್ಗೆ ತುಳುಕೂಟ ಪ್ರಯತ್ನ ನಡೆಸುತ್ತಿದೆ ಎಂದವರು ನುಡಿದರು.







