ಅ.1 ರಿಂದ ಕನ್ನಡೇತರ ಫಲಕಗಳ ಕಿತ್ತು ಹಾಕುವ ಚಳವಳಿ: ವಾಟಾಳ್ ನಾಗರಾಜ್ ಎಚ್ಚರಿಕೆ
"ಬೆಂಕಿ ಹಚ್ಚಿ, ಕಲ್ಲು ಎಸೆದು ಬುದ್ಧಿ ಕಲಿಸುತ್ತೇವೆ"
ಬೆಂಗಳೂರು, ಸೆ.14: ರಾಜಧಾನಿ ಬೆಂಗಳೂರು ವ್ಯಾಪ್ತಿಯ ವ್ಯಾಪಾರ ಮಳಿಗೆಗಳ ಮೇಲಿರುವ ಕನ್ನಡೇತರ ಫಲಕಗಳಿಗೆ ಬೆಂಕಿ ಹಚ್ಚುವುದೇ ಮಾತ್ರವಲ್ಲ, ಕಲ್ಲು ಎಸೆದು ಬುದ್ಧಿ ಕಲಿಸಲಾಗುವುದು ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಎಚ್ಚರಿಸಿದ್ದಾರೆ.
ಶನಿವಾರ ಪುರಭನದಲ್ಲಿ ಅವರ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ, ಬೂಟ್ಸ್ ಏಟು ದಿನಾಚರಣೆ ಹಾಗೂ ಕನ್ನಡಿಗರ ಮಹಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಅಕ್ಟೋಬರ್ 1ನೇ ತಾರೀಖಿನಿಂದ ಕನ್ನಡೇತರ ಫಲಕ ಕಿತ್ತು ಹಾಕುವ ಚಳುವಳಿ ಹಮ್ಮಿಕೊಳ್ಳಲಾಗಿದೆ. ಮೊದನೇ ಹಂತದಲ್ಲಿ ಬೆಂಗಳೂರಿನ ಮಲ್ಲೇಶ್ವರಂ, ಚಿಕ್ಕಪೇಟೆ, ಗಾಂಧಿನಗರಕ್ಕೆ ನುಗ್ಗುವ ನಾವು, ಹಿಂದಿ ಸೇರಿದಂತೆ ಕನ್ನಡೇತರ ಫಲಕಗಳನ್ನು ಕಿತ್ತು ಹಾಕಿ, ಬೆಂಕಿ ಹಚ್ಚುತ್ತೇವೆ. ಅಗತ್ಯವಿದ್ದರೆ, ಮಳಿಗೆಗಳ ಮೇಲೆ ಕಲ್ಲು ಎಸೆಯುತ್ತೇವೆ. ಈ ಬಾರಿಯ ಚಳುವಳಿ ಇತಿಹಾಸ ಪುಟಗಳನ್ನು ಸೇರಲಿದ್ದು, ಸರಕಾರ ನಮ್ಮನ್ನು ಜೈಲಿಗೆ ಹಾಕಿದರೂ, ಹೆದರುವ ಪ್ರಶ್ನೆಯೇ ಇಲ್ಲ ಎಂದು ನುಡಿದರು.
1962ರ ಸೆ.7ರಂದು ಕೆ.ಜಿ.ರಸ್ತೆಯ ಅಲಂಕಾರ್ ಚಿತ್ರಮಂದಿರದಲ್ಲಿ ಕನ್ನಡ ಚಿತ್ರವನ್ನು ಪ್ರದರ್ಶಿಸದೆ ಹಿಂದಿ ಚಿತ್ರವೇ ರಾರಾಜಿಸುತಿತ್ತು. ಆ ಸಂದರ್ಭದಲ್ಲಿ ಕನ್ನಡ ಚಿತ್ರವನ್ನು ಪ್ರದರ್ಶನ ಮಾಡುವಂತೆ ಚಿತ್ರಮಂದಿರಕ್ಕೆ ನುಗ್ಗಿ ಹೋರಾಟ ಮಾಡಿದ್ದ ಪರಿಣಾಮವಾಗಿ ಪೊಲೀಸರು ನನಗೆ ಬೂಟ್ಸ್ ಏಟಿನ ರುಚಿ ತೋರಿಸಿದ್ದರು. ಆದ್ದರಿಂದ ಆ ದಿನವನ್ನೇ ನನ್ನ ಹುಟ್ಟುಹಬ್ಬದ ದಿನವಾಗಿ ಆಚರಿಸುತ್ತಿದ್ದೇನೆ ಎಂದು ಹೋರಾಟದ ಹಾದಿಯನ್ನು ವಾಟಾಳ್ ಮೆಲುಕು ಹಾಕಿದರು.
ಡಾ.ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ಯಾವುದೇ ಕಾರಣಗಳಿಗಾದರೂ ಕರ್ನಾಟಕ ಬಂದ್ ಮಾಡಬೇಕು, ಅದು ಯಶಸ್ವಿಯಾಗಬೇಕು ಎಂದರೆ, ಕನ್ನಡ ಒಕ್ಕೂಟದ ಸಹಕಾರವಿಲ್ಲದೇ ಅದು ಸಾಧ್ಯವೇ ಇಲ್ಲ. ಅಷ್ಟರ ಮಟ್ಟಿಗೆ ಒಕ್ಕೂಟವನ್ನು ವಾಟಾಳ್ ಕಟ್ಟಿದ್ದಾರೆ ಎಂದರು.
ಅಪ್ಪ ಮಾಡಿದ್ದೇ ಸರಿ: ಕನ್ನಡ ಸಾಹಿತ್ಯಕ್ಕೆ ಕುವೆಂಪು ಹೇಗೂ, ಚಿತ್ರಂರಂಗಕ್ಕೆ ಡಾ.ರಾಜ್ಕುಮಾರ್ ಹೇಗೂ, ಅದೇ ರೀತಿ, ಹೋರಾಟ ಕ್ಷೇತ್ರಕ್ಕೆ ವಾಟಾಳ್ ನಾಗರಾಜ್. ಅವರು ಮಾಡುವ ಹೋರಾಟಗಳು ಸರಿಯಾಗಿವೆ ಎಂದು ವಾಟಾಳ್ ನಾಗರಾಜ್ ಪುತ್ರಿ ಅನುಪಮಾ ಹೇಳಿದರು.
ನಮ್ಮ ತಂದೆಯ ಜನ್ಮ ದಿನಾಂಕ ಕುಟುಂಬಕ್ಕೆ ಗೊತ್ತಿಲ್ಲ. ಹಾಗಾಗಿ, ಬೂಟ್ಸ್ ಏಟು ತಿಂದ ದಿನವೇ, ನಾವು ಹುಟ್ಟು ಹಬ್ಬ ಆಚರಣೆ ಮಾಡುತ್ತಿದ್ದೇವೆ ಎಂದ ಅವರು, ಇಂತಹ ಕಳಂಕ ಇರುವ ಸಮಾಜದಲ್ಲಿ ರಾಜಕಾರಣಿ, ಚಳುವಳಿಗಾರನಾಗಿ ವಾಟಾಳ್ ಅವರು ಆದರ್ಶವಾಗಿ ನಡೆದುಕೊಂಡು ಬಂದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಹೋರಾಟಗಾರ ಟಿ.ಪಿ.ಪ್ರಸನ್ನಕುಮಾರ್, ಮೂಗೂರು ನಂಜುಂಡಸ್ವಾಮಿ, ಪ್ರವೀಣ್ಕುಮಾರ್ ಶೆಟ್ಟಿ ಸೇರಿದಂತೆ ಕನ್ನಡ ಪರ ಹೋರಾಟ ಸಂಘಗಳ ಮುಖ್ಯಸ್ಥರು ಸೇರಿದಂತೆ ಪ್ರಮುಖರಿದ್ದರು