ಬೆಳಗಾವಿ ಭಾಗದ ಶಾಸಕರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಸಭೆ
ಬೆಂಗಳೂರು, ಸೆ. 14: ಬೆಳಗಾವಿ ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳ ಪರಿಹಾರ ಕಾರ್ಯಗಳು ಹಾಗೂ ಜನರಿಗೆ ಪುನರ್ವಸತಿ ಕಲ್ಪಿಸುವ ಸಂಬಂಧ ಜಿಲ್ಲೆಯ ಶಾಸಕರು ಹಾಗೂ ಸಚಿವರೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮಾಲೋಚನೆ ನಡೆಸಿದರು.
ಶನಿವಾರ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ತನ್ನ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಚಿವರಾದ ಬಸವರಾಜ ಬೊಮ್ಮಾಯಿ, ಶಶಿಕಲಾ ಜೊಲ್ಲೆ, ಆರ್. ಅಶೋಕ್, ಶಾಸಕರಾದ ಪಿ.ರಾಜೀವ್, ಅಭಯ್ ಪಾಟೀಲ್, ದೊಡ್ಡನಗೌಡರ ಸೇರಿ ಇನ್ನಿತರರು ಭಾಗವಹಿಸಿದ್ದರು.
ಹಣಕಾಸು ಹೊಂದಾಣಿಕೆ: ನೆರೆ ಪೀಡಿತ ಪ್ರದೇಶಗಳ ಪರಿಹಾರ ಕಾರ್ಯಗಳಿಗೆ ರಾಜ್ಯದಲ್ಲಿ ಹಣಕಾಸು ಕೊರತೆ ಉಂಟಾದರೆ ಎಲ್ಲಿಂದ ನೆರವು ತರಬೇಕೆಂಬ ಬಗ್ಗೆ ಸಮಾಲೋಚನೆ ನಡೆಸಲಾಗಿದೆ ಎಂದು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಶಾಸಕರ ಸಭೆ ನಡೆಸಿದ್ದು, ಪ್ರತಿ ಕ್ಷೇತ್ರಗಳ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮಾಹಿತಿ ನೀಡಿದ್ದು, ಪ್ರವಾಹ ಪೀಡಿತ ಜನರಿಗೆ ಪುನರ್ವಸತಿ ಕಲ್ಪಿಸುವ ಸಂಬಂಧ ಚರ್ಚಿಸಲಾಗಿದೆ ಎಂದರು.
ನಾನೂ ನೆರೆ ಪೀಡಿತ ಪ್ರದೇಶದಿಂದ ಬಂದಿದ್ದೇನೆ. ನೆರೆ ಸಂತ್ರಸ್ತರ ಕುಟುಂಬಕ್ಕೆ ತಕ್ಷಣವೇ 10 ಸಾವಿರ ರೂ.ಗಳನ್ನು ತಲುಪಿಸಲಾಗುತ್ತದೆ. ಮನೆಗಳನ್ನು ನಿರ್ಮಿಸಿ ಕೊಡಲು 5 ಲಕ್ಷ ರೂ.ಗಳನ್ನು ನೀಡಲಾಗುವುದು ಎಂದು ಘೋಷಿಸಿದ್ದು, ತಕ್ಷಣವೇ ಹಣ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಈಗಾಗಲೇ ರಾಜ್ಯ ಸರಕಾರ ನೆರೆ ಸಂತ್ರಸ್ತರಿಗೆ ಪರಿಹಾರ ಕಾರ್ಯಗಳನ್ನು ಕ್ರಮ ಕೈಗೊಂಡಿದ್ದು, ಇನ್ನೂ ಅಗತ್ಯವಿರುವ ಎಲ್ಲ ಕಾರ್ಯಗಳನ್ನು ಕೈಗೊಳ್ಳಲಿದೆ ಎಂದ ಅವರು, ನೆರೆ ಸಂತ್ರಸ್ತರು ಯಾವುದೇ ಕಾರಣಕ್ಕೂ ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಅವರು ಅಭಯ ನೀಡಿದರು.
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶಾಸಕರಾದ ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಕೆಲ ಶಾಸಕರು ಸಿಎಂ ಸಭೆಗೆ ಅನ್ಯ ಕಾರ್ಯನಿಮಿತ್ತ ಗೈರು ಹಾಜಗಿದ್ದಾರೆ. ಅವರ ಗೈರುಹಾಜರಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟನೆ ನೀಡಿದರು.