ಹಿಂದಿ ಭಾಷೆಯನ್ನು ಇಡೀ ದೇಶಕ್ಕೆ ಹೇರುವುದು ಅಸಂವಿಧಾನಿಕ: ಮಾಜಿ ಸಚಿವೆ ರಾಣಿ ಸತೀಶ್

ಬೆಂಗಳೂರು, ಸೆ. 15: ಒಕ್ಕೂಟ ವ್ಯವಸ್ಥೆಯಲ್ಲಿ ಏಕಮುಖವಾಗಿ ಹಿಂದಿ ಭಾಷೆಯನ್ನು ಇಡೀ ದೇಶಕ್ಕೆ ಹೇರುವುದು ಒಳ್ಳೆಯದಲ್ಲ. ಇದು ಅಪ್ರಸ್ತುತ ಮತ್ತು ಅಸಂವಿಧಾನಿಕ ಕ್ರಮ ಎಂದು ಮಾಜಿ ಸಚಿವೆ ರಾಣಿ ಸತೀಶ್ ಅಭಿಪ್ರಾಯಪಟ್ಟರು.
ರವಿವಾರ ನಗರದ ಕೆಪಿಸಿಸಿ ಕಚೇರಿ ಆವರಣದಲ್ಲಿ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿಯ 36ನೆ ಸಂಸ್ಥಾಪನಾ ದಿನದ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದ ದೇಶ ನಮ್ಮದು. ಇಂಥದ್ದೊಂದು ಮಹತ್ತರ ಉದ್ದೇಶ ಹೊಂದಿದ ಈ ದೇಶವನ್ನು ಎಲ್ಲ ಧರ್ಮಗಳ ಅನುಯಾಯಿಗಳು ಕಟ್ಟಿದ್ದಾರೆ. ಇಲ್ಲಿ ಸಾವಿರಾರು ಜಾತಿ, ಮತ, ಪಂಥ, ಭಾಷೆಗಳಿವೆ. ಹೀಗಾಗಿ, ದೇಶದಲ್ಲಿ ಒಂದೆ ಭಾಷೆಯನ್ನು ಹೇರಿಕೆ ಮಾಡುವುದು ಅಸಂವಿಧಾನಿಕವಾದ ಮಾರ್ಗ ಎಂದರು.
ಕಾಂಗ್ರೆಸ್ ಪಕ್ಷ ಮಹಿಳಾ ವಿಭಾಗ ಆರಂಭಿಸಿ 36 ವರ್ಷ ಕಳೆದಿದೆ. ಮಹಿಳೆಯರಿಗೆ ಅಸ್ಮಿತೆ, ಅವಕಾಶ ಹಾಗೂ ಆದ್ಯತೆಯನ್ನು ನೀಡಿ ಮಹಿಳೆಯರಿಗೆ ಇಂಥದ್ದೊಂದು ಅವಕಾಶವನ್ನು ಕಾಂಗ್ರೆಸ್‌ನಲ್ಲಿ ನೀಡಿದವರು ಇಂದಿರಾ ಗಾಂಧಿ. ಮಹಿಳೆಯರು ರಾಜಕೀಯವಾಗಿ ಹೆಚ್ಚು ಮುಂದೆ ಬರಲು ಅವರ ಸಹಕಾರವೇ ಕಾರಣವಾಗಿದೆ. ಇನ್ನು ಮಾಜಿ ಪ್ರಧಾನಿ ರಾಜೀವ್ ಗಾಂಧಿ ವಿಶೇಷವಾಗಿ ಘಟಕಕ್ಕೆ ಶಕ್ತಿ ತುಂಬುವ ಕಾರ್ಯ ಮಾಡಿದ್ದರು ಎಂದು ಸ್ಮರಿಸಿದರು.
ಕಾನೂನಿನಲ್ಲಿ ತಿದ್ದುಪಡಿ ತರುವ ಮೂಲಕ ವಿಶೇಷ ಒತ್ತುಕೊಟ್ಟು 16, 17 ತಿದ್ದುಪಡಿಗಳನ್ನು ಮಾಡುವ ಮೂಲಕ ವಿಶೇಷವಾಗಿ ಪಂಚಾಯತ್ ರಾಜ್‌ನಲ್ಲಿ ಶೇ.33ರಷ್ಟು ಮೀಸಲಾತಿ ಜಾರಿಗೆ ತರುವ ಮಹತ್ತರ ನಿರ್ಣಯ ಕೈಗೊಂಡಿದ್ದರೂ. ಇದರ ಪರಿಣಾಮ 13 ಲಕ್ಷಕ್ಕೂ ಹೆಚ್ಚು ಮಹಿಳೆಯರು ಪಂಚಾಯತ್ ಗಳಲ್ಲಿ ಅಧ್ಯಕ್ಷರು ಉಪಾಧ್ಯಕ್ಷರಾಗಿ, ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ವಿವರಿಸಿದರು.
ಪಕ್ಷದ ಬಲ ಹೆಚ್ಚಿಸುವ ನಿಟ್ಟಿನಲ್ಲಿ ಮಹಿಳಾ ಕಾಂಗ್ರೆಸ್‌ನ ಪಾತ್ರ ಅತ್ಯಂತ ಪ್ರಮುಖ ವಾಗಿದ್ದು, ಇಂದು ಕಾಂಗ್ರೆಸ್ ಪಕ್ಷದಲ್ಲಿ ಮಹಿಳೆಯರಿಗೆ ಸಿಗುತ್ತಿರುವ ಗೌರವ ಮನ್ನಣೆ ಬೇರೆಲ್ಲೂ ಸಿಗುತ್ತಿಲ್ಲ. ಇದರ ಸದ್ಬಳಕೆ ಮಾಡಿಕೊಳ್ಳಿ. ಇನ್ನು ಮಹಿಳೆಯರು ಇನ್ನಷ್ಟು ಸಕ್ರಿಯವಾಗಿ ರಾಜಕೀಯಕ್ಕೆ ಬರಬೇಕು ಎಂಬುದು ರಾಜೀವ್ ಗಾಂಧಿಯವರ ಆಶಯವಾಗಿತ್ತು. ಇದನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಹಿಳೆಯರು ಈಡೇರಿಸಬೇಕು ಎಂದು ಹೇಳಿದರು.
ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮಾತನಾಡಿ, ರಾಜ್ಯ ಅತ್ಯಂತ ಕಷ್ಟದಲ್ಲಿದೆ ಈ ಸಂದರ್ಭದಲ್ಲಿ ಕೇಂದ್ರ ಸರಕಾರ ತಾರತಮ್ಯ ಧೋರಣೆಯನ್ನು ತೋರಿಸುತ್ತಿದೆ. ಇದನ್ನು ನಾನು ಖಂಡಿಸುತ್ತೇನೆ. ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಬೆಳೆಸುವ ವಿಚಾರಕ್ಕೆ ಕೇಂದ್ರ ಸರಕಾರದಿಂದ ಸಹಕಾರ ಸಿಗುತ್ತಿಲ್ಲ. ಅನೇಕ ಪರೀಕ್ಷೆಗಳು ಕೂಡ ಕನ್ನಡ ಮಾಧ್ಯಮದಲ್ಲಿ ಸಿಗದಿರುವುದು ಬೇಸರ ತರುತ್ತಿದ್ದು, ನಮ್ಮವರಿಗೆ ಅವಕಾಶ ತಪ್ಪುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದೇಶದ 22 ಭಾಷೆಗಳನ್ನು ಸಂವಿಧಾನವು ಅಧಿಕೃತ ಭಾಷೆಗಳೆಂದು ಘೋಷಣೆ ಮಾಡಿದೆ. ದೇಶದಾದ್ಯಂತ ಒಂದೇ ಭಾಷೆ ಹೇರಿಕೆಯನ್ನು ಪಕ್ಷ ಖಂಡಿಸಿದೆ. ಮಹಿಳಾ ಘಟಕ ಕೂಡ ಇದಕ್ಕೆ ಸಹಮತ ವ್ಯಕ್ತಪಡಿಸಿದೆ. ಹಿಂದಿ ದಿವಸ್ ಆಚರಣೆ ಅಥವಾ ಬಳಕೆಯನ್ನು ನಾವು ವಿರೋಧಿಸುತ್ತಿಲ್ಲ. ಆದರೆ ಆಯಾ ರಾಜ್ಯದ ಮಾತೃ ಭಾಷೆಗೆ ಪ್ರಾಧಾನ್ಯ ನೀಡಬೇಕು ಎಂದು ತಿಳಿಸಿದರು.
ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾಅಮರನಾಥ್ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿ, ಘಟಕದ ಜವಾಬ್ದಾರಿ ಹಾಗೂ ಕಾರ್ಯ ನಿರ್ವಹಣೆಯ ಕುರಿತು ತಿಳಿಸಿ ಕೊಟ್ಟರು. ಇನ್ನು ಹಿರಿಯ ಕಾಂಗ್ರೆಸ್ ನಾಯಕರ ಅನುಪಸ್ಥಿತಿಯಲ್ಲಿ ಪ್ರದೇಶ ಮಹಿಳಾ ಕಾಂಗ್ರೆಸ್‌ನ 36ನೆ ಸಂಸ್ಥಾಪನಾ ದಿನ ಕಾರ್ಯಕ್ರಮ ನಡೆಯಿತು.
‘ಹಿಂದಿ ಹೇರಿಕೆ ಮಾಡಿದರೆ ಅದರ ವಿರುದ್ಧ ರಾಜ್ಯದ ಜನ ಅನಿವಾರ್ಯವಾಗಿ ಪ್ರತಿಭಟನೆ ಇಳಿಯಬೇಕಾಗುತ್ತದೆ. ಕನ್ನಡ ಹಾಗೂ ಪ್ರಾದೇಶಿಕ ಭಾಷೆಗಳನ್ನು ಕೇಂದ್ರ ಸರಕಾರ ನಿರ್ಲಕ್ಷಿಸುತ್ತಿದೆ. ಈ ಸಂದರ್ಭದಲ್ಲಿ ಎಚ್ಚರಿಕೆಯ ಗಂಟೆಯನ್ನು ನಾವು ಬಾರಿಸಬೇಕಾಗಿದೆ’
-ಪುಷ್ಪಾ ಅಮರನಾಥ್, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ







