ಹೆಚ್ಚುತ್ತಿರುವ ನಿರುದ್ಯೋಗಕ್ಕೆ ಉತ್ತರ ಭಾರತೀಯರೇ ಕಾರಣ ಎಂದ ಕೇಂದ್ರ ಸಚಿವ

ಹೊಸದಿಲ್ಲಿ,ಸೆ.15: ದೇಶದ ನಿರುದ್ಯೋಗ ಮಟ್ಟ ಹೆಚ್ಚಾಗಲು ಉತ್ತರ ಭಾರತೀಯರನ್ನು ದೂಷಿಸಿರುವ ಕೇಂದ್ರ ಸಚಿವ ಸಂತೋಷ್ ಗಂಗ್ವರ್, ಉತ್ತರ ಭಾರತೀಯ ಅಭ್ಯರ್ಥಿಗಳಲ್ಲಿ ಗುಣಮಟ್ಟದ ಕೊರತೆಯಿದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಉದ್ಯೋಗಾವಕಾಶಗಳಿಗೆ ಯಾವ ಕೊರತೆಯೂ ಇಲ್ಲ. ಆದರೆ ಉತ್ತರ ಭಾರತದಲ್ಲಿ ನೇಮಕಾತಿ ಬಯಸುವ ಕಂಪೆನಿಗಳು ಈ ಭಾಗದಲ್ಲಿ ನಮಗೆ ಅಗತ್ಯವಿರುವ ಕೌಶಲ್ಯ ಮತ್ತು ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಸಿಗುತ್ತಿಲ್ಲ ಎಂದು ನನ್ನ ಬಳಿ ಹೇಳಿಕೊಂಡಿವೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಸಹಾಯಕ ಸಚಿವ ತಿಳಿಸಿದ್ದಾರೆ.
ನಾನು ಅದೇ ಸಚಿವಾಲಯದ ಉಸ್ತುವಾರಿ ನೋಡಿಕೊಳ್ಳುತ್ತಿದ್ದು ದೈನಂದಿನ ಆಧಾರದಲ್ಲಿ ಪರಿಸ್ಥಿತಿಯನ್ನು ಗಮನಿಸುತ್ತಿರುತ್ತೇನೆ. ದೇಶದಲ್ಲಿ ಉದ್ಯೋಗಕ್ಕೇನೂ ಕೊರತೆಯಿಲ್ಲ. ನಮ್ಮಲ್ಲಿ ಉದ್ಯೋಗ ಕೇಂದ್ರಗಳು ಇರುವುದು ಒಂದು ಉದ್ದೇಶಕ್ಕಾಗಿ ಮತ್ತು ನಾವು ಪ್ರತ್ಯೇಕ ವ್ಯವಸ್ಥೆಯನ್ನೂ ಅಭಿವೃದ್ಧಿಪಡಿಸಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ.
ಕಳೆದ ಮೇಯಲ್ಲಿ ಬಿಡುಗಡೆಯಾದ ವರದಿಯಲ್ಲಿ, 2017-18ರಲ್ಲಿ ಭಾರತದ ನಿರುದ್ಯೋಗ ದರ 45 ವರ್ಷಗಳಲ್ಲೇ ಅಧಿಕ 6.1ಶೇ ಆಗಿದೆ ಎಂದು ತಿಳಿಸಲಾಗಿತ್ತು. ಗಂಗ್ವರ್ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಗಂಗ್ವರ್ ಉತ್ತರ ಭಾರತದ ಯುವಕ ಮತ್ತು ಯುವತಿಯರನ್ನು ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸಚಿವರೇ, ನಿಮ್ಮ ಸರಕಾರ ಐದು ವರ್ಷಗಳಿಗೂ ಅಧಿಕ ಸಮಯದಿಂದ ಅಧಿಕಾರದಲ್ಲಿದೆ. ನಿಮ್ಮ ಸರಕಾರದಿಂದ ಉಂಟಾಗಿರುವ ಆರ್ಥಿಕ ಕುಸಿತದ ಫಲವಾಗಿ ಉದ್ಯೋಗ ನಷ್ಟ ಸಂಭವಿಸಿದೆ. ನೀವು ಉತ್ತರ ಭಾರತೀಯರನ್ನು ಅವಮಾನಿಸುವ ಮೂಲಕ ತಪ್ಪಿಸಿಕೊಳ್ಳಲು ನೋಡುತ್ತಿದ್ದೀರಿ. ಆದರೆ ಸಾಧ್ಯವಿಲ್ಲ ಎಂದು ಪ್ರಿಯಾಂಕಾ ಗಾಂಧಿ ಎಚ್ಚರಿಸಿದ್ದಾರೆ.







