ಸಹೋದ್ಯೋಗಿ ಮೇಲೆ ದಾಳಿ: ಪ್ರತಿಕ್ರಿಯಿಸದ ಪೊಲೀಸರು, ಗೃಹರಕ್ಷಕ ಸಿಬ್ಬಂದಿ ವಜಾ

ಚಂಡಿಗಡ,ಸೆ.15: ಪಂಜಾಬ್‌ನ ಅಮೃತಸರದಲ್ಲಿ ಮಾದಕ ದ್ರವ್ಯ ವ್ಯಾಪಾರಿಯ ಮನೆಗೆ ದಾಳಿ ನಡೆಸಿದ ಸಂದರ್ಭ ತನ್ನ ಸಹೋದ್ಯೋಗಿಯ ಮೇಲೆ ಹಲ್ಲೆ ನಡೆದಾಗ ಪ್ರತಿಕ್ರಿಯಿಸದೆ ಸುಮ್ಮನೆ ನಿಂತು ವೀಕ್ಷಿಸಿದ ಮೂವರು ಪೊಲೀಸರು ಮತ್ತು ಓರ್ವ ಗೃಹರಕ್ಷಕ ಸಿಬ್ಬಂದಿಯನ್ನು ತಕ್ಷಣದಿಂದ ವಜಾಗೊಳಿಸುವಂತೆ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಆದೇಶ ನೀಡಿದ್ದಾರೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ.
ಶಂಕಿತ ಮಾದಕ ದ್ರವ್ಯ ವ್ಯಾಪಾರಿ ಅಮನ್‌ದೀಪ್ ಸಿಂಗ್‌ನ ಅಮೃತಸರದ ಚೊಕಗಾಂವ್ ಗ್ರಾಮದಲ್ಲಿರುವ ನಿವಾಸ ಮೇಲೆ ಉಪನಿರೀಕ್ಷಕ ಬಲದೇವ್ ಸಿಂಗ್ ಮತ್ತವರ ತಂಡ ಶುಕ್ರವಾರ ದಾಳಿ ನಡೆಸಿತ್ತು. ದಾಳಿಯ ಸಂದರ್ಭ ಕೆಲವರು ಅಧಿಕಾರಿಯ ಮೇಲೆ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದರು. ಈ ಘಟನೆಯ ದೃಶ್ಯಾವಳಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿತ್ತು. ಅದರಲ್ಲಿ ಸಿಂಗ್ ಅವರ ಸಹೋದ್ಯೋಗಿಗಳು ಅವರ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ಸುಮ್ಮನೆ ನಿಂತು ನೋಡುತ್ತಿರುವುದು ಕಂಡುಬಂದಿತ್ತು.
ಘಟನೆಯ ಕುರಿತು ಖೇದ ವ್ಯಕ್ತಪಡಿಸಿರುವ ಮುಖ್ಯಮಂತ್ರಿ, ದಾಳಿ ನಡೆಸಿದ ಉಪನಿರೀಕ್ಷಕನ ಮೇಲೆಯೇ ಮನೆಯಲ್ಲಿದ್ದವರು ಹಲ್ಲೆ ನಡೆಸುತ್ತಿರುವಾಗ ಅವರ ಜೊತೆಗಿದ್ದ ಓರ್ವ ಎಎಸ್‌ಐ ಮತ್ತು ನಾಲ್ವರು ಜವಾನರು ಸುಮ್ಮನೆ ನಿಂತು ವೀಕ್ಷಿಸುತ್ತಿದ್ದರು. ಸಮವಸ್ತ್ರ ಧರಿಸಿರುವ ಪಡೆಯಲ್ಲಿ ಇಂತಹ ಪುಕ್ಕಲು ವರ್ತನೆ ಒಪ್ಪುವಂತದ್ದಲ್ಲ ಎಂದು ತಿಳಿಸಿದ್ದಾರೆ. ಘಟನೆಯಲ್ಲಿ ಪೊಲೀಸರ ಪಾತ್ರದ ಬಗ್ಗೆ ತನಿಖೆ ನಡೆಸುವಂತೆ ಪಂಜಾಬ್ ಪೊಲೀಸ್ ಮುಖ್ಯಸ್ಥ ದಿನಕರ್ ಗುಪ್ತಾ ಆದೇಶಿಸಿದ್ದಾರೆ.
ತನಿಖೆಯ ವರದಿಯ ಆಧಾರದಲ್ಲಿ ಹೆಚ್ಚುವರಿ ಉಪನಿರೀಕ್ಷಕ ಸವಿಂದರ್ ಸಿಂಗ್, ಮುಖ್ಯ ಪೇದೆ ಗುರುವಿಂದರ್ ಸಿಂಗ್, ಪೇದೆ ನಿಶಾನ್ ಸಿಂಗ್ ಮತ್ತು ಗೃಹರಕ್ಷಕ ಸಿಬ್ಬಂದಿ ದರ್ಶನ್ ಸಿಂಗ್ ಅವರನ್ನು ಕರ್ತವ್ಯಲೋಪದ ಆರೋಪದಲ್ಲಿ ವಜಾಗೊಳಿಸಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.







