ದಸರಾ ಕ್ರೀಡೆ ಸಮಾಜಿಕ ಸಾಮರಸ್ಯಕ್ಕೆ ಪೂರಕ- ಸಂಜೀವ ಮಠಂದೂರು
ಪುತ್ತೂರು ತಾಲೂಕು ದಸರಾ ಕ್ರೀಡಾಕೂಟ

ಪುತ್ತೂರು; ಜಾತಿ-ಮತ ಬೇಧ ಮರೆತು ಸಾಂಸ್ಕೃತಿಕ ಕ್ರೀಡೆಯಾಗಿ ಭಾರತದ ದಸರಾ ಜಗತ್ತಿನಲ್ಲಿ ಪರಿಣಾಮ ಬೀರಿದೆ. ದಸರಾ ಕ್ರೀಡೆ ಕೇವಲ ಸ್ಪರ್ಧೆಗೆ ಮೀಸಲಾಗದೆ ಸಮಾಜದ ಸಾಮರಸ್ಯಕ್ಕೂ ಪೂರಕವಾಗಿದ್ದು, ದಸರಾ ಹಬ್ಬದ ಹಿನ್ನಲೆಯಲ್ಲಿ ನಡೆಯುತ್ತಿರುವ ಕ್ರೀಡಾಕೂಡವೂ ಒಂದು ಸಾಂಸ್ಕೃತಿಕ ಹಬ್ಬವಾಗಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪುತ್ತೂರು ತಾಲೂಕು ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಮಾತನಾಡಿ, ಸಾಂಸ್ಕೃತಿಕವಾಗಿ ಆಚರಣೆ ಮಾಡುವ ದಸರಾ ಹಬ್ಬ ಇಂದು ಕ್ರೀಡಾ ಮನೋಭಾವ ಬೆಳೆಸುವಲ್ಲಿಯೂ ಸಹಕಾರಿಯಾಗಿದೆ. ಕ್ರೀಡಾ ಕೂಟವನ್ನು ಹಮ್ಮಿಕೊಳ್ಳಲು ಸುಸಜ್ಜಿತ ಸಿಂಥೆಟಿಕ್ ಕ್ರೀಡಾಂಗಣದ ಅವಶ್ಯಕತೆಯಿದೆ ಎಂದರು. ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಕ್ರೀಡಾ ಜ್ಯೋತಿ ಬೆಳಗಿದರು.
ಪುತ್ತೂರು ಹಾಗೂ ಕಡಬ ತಾಲೂಕಿನ 68 ಗ್ರಾಮಗಳ ಸುಮಾರು ಒಂದು ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜು ಜಂಟಿ ಆಶ್ರಯದಲ್ಲಿ ಕ್ರೀಡಾಕೂಟ ನಡೆಯಿತು. ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಕೇಸರಿ, ಬಿಳಿ, ಹಸಿರು ತ್ರಿವರ್ಣ ಧ್ವಜದೊಂದಿಗೆ ಆಕರ್ಷಕ ಪಥ ಸಂಚಲನ ನಡೆಯಿತು. ಈ ಸಂದರ್ಭದಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಮಾಧಕ ಕೆ. ಅವರನ್ನು ಸನ್ಮಾನಿಸಲಾಯಿತು.
ನಗರಸಭೆ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಕ್ರೀಡಾ ಧ್ವಜಾರೋಹಣ ಮಾಡಿದರು. ಕ್ಯಾಂಪ್ಕೋ ನಿರ್ದೇಶಕ ಚನಿಲ ತಿಮ್ಮಪ್ಪ ಶೆಟ್ಟಿ, ನಗರಸಭೆ ಸದಸ್ಯೆ ಗೌರಿ ಬನ್ನೂರು , ಜಿಪಂ ಶಿಕ್ಷಣ ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥಶೆಟ್ಟಿ, ಕ್ಷೇತ್ರ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮೌರಿಸ್ ಮಸ್ಕರೇನಸ್, ಕೊಂಬೆಟ್ಟು ಶಾಲಾ ಉಪಪ್ರಾಂಶುಪಾಲೆ ಮರ್ಸಿ ಮಮತಾ ಮೊನಿಸ್, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ , ರಾಷ್ಟ್ರ ಪ್ರಶಸ್ತಿ ವಿಜೇತ ದೈಹಿಕ ಶಿಕ್ಷಕ ದಯಾನಂದ ರೈ ಕೋರ್ಮಂಡ ಉಪಸ್ಥಿತರಿದ್ದರು.
ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಮಾಮಚ್ಚನ್ ಎಂ. ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.







