ದೇವಿಕಾ ರಾಣಿ ಎಸ್ಟೇಟ್‌ನಲ್ಲಿ ಫಿಲಂ ಸಿಟಿ: ಸಿಎಂ ಯಡಿಯೂರಪ್ಪ

ಬೆಂಗಳೂರು, ಸೆ.15: ರಾಜ್ಯಕ್ಕೆ ಫಿಲಂ ಸಿಟಿ ಸ್ಥಾಪಿಸಬೇಕೆಂಬ ಬೇಡಿಕೆ ಈಡೇರಿಕೆಗೊಳ್ಳುತ್ತಿದ್ದು, ರಾಜಧಾನಿ ಬೆಂಗಳೂರಿನ ಹೊರವಲಯದ ದೇವಿಕಾ ರಾಣಿ ರೋರಿಚ್ ಎಸ್ಟೇಟ್‌ನಲ್ಲಿ ಫಿಲಂ ಸಿಟಿ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದರು.
ರವಿವಾರ ನಗರದ ಕೆಜಿ ರಸ್ತೆಯ ಎಫ್‌ಕೆಸಿಸಿಐ ಸಭಾಂಗಣದಲ್ಲಿ ಭಾರತ ರತ್ನ ಸರ್. ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿದ್ದ, ಸರ್.ಎಂ.ವಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ದೇವಿಕಾರಾಣಿ ರೋರಿಂಚ್ ಎಸ್ಟೇಟ್‌ನ 600 ಎಕರೆ ಪ್ರದೇಶದಲ್ಲಿ ಫಿಲಂ ಸಿಟಿ ನಿರ್ಮಾಣದ ನಿರ್ಧಾರವನ್ನು ಸರಕಾರ ಮಾಡಿದೆ. ಸದ್ಯದಲ್ಲೇ ಫಿಲಂ ಸಿಟಿ ಸ್ಥಾಪನೆಯ ಕೆಲಸ ಕಾರ್ಯಗಳು ಆರಂಭವಾಗಲಿವೆ ಎಂದರು.
ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ ನಡೆಸುತ್ತಿರುವ ಕೃಷಿ ಕೈಗಾರಿಕಾ ಸಮ್ಮೇಳನಕ್ಕೆ ಸರಕಾರದಿಂದ ಅಗತ್ಯ ನೆರವು ನೀಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದ ಅವರು, ರಾಜ್ಯದ ಹಲವು ಭಾಗಗಳಲ್ಲಿ ನೆರೆ ಪರಿಸ್ಥಿತಿ ಉಂಟಾಗಿ ಸಾವಿರಾರು ಜನ ಆಸ್ತಿ-ಪಾಸ್ತಿ ಕಳೆದುಕೊಂಡು ಬದುಕು ದುಸ್ತರವಾಗಿದೆ. ಇವರ ಪ್ರಗತಿಗೆ ಸರಿ ಸುಮಾರು 30 ಸಾವಿರಕ್ಕೂ ಅಧಿಕ ಕೋಟಿ ರೂಪಾಯಿಗಳ ಅಗತ್ಯತೆ ಇದೆ. ಹಾಗಾಗಿ, ಕೈಗಾರಿಕೋದ್ಯಮಿಗಳು ನೆರವು ಒದಗಿಸಲು ಮುಂದಾಗಬೇಕೆಂದರು.
ಬೆಂಗಳೂರಿಗೆ ಮೂಲಭೂತ ಸೌಕರ್ಯ ಒದಗಿಸಿ ಬೆಂಗಳೂರನ್ನು ಅಭಿವೃದ್ಧಿ ಪಡಿಸುವಂತೆ ಉದ್ಯಮಿಗಳು ಬೇಡಿಕೆ ಇಟ್ಟಿದ್ದಾರೆ. ಆದರೆ, ನನಗೆ ಆರೇಳು ತಿಂಗಳು ಸಮಯ ಕೊಡಿ, ಬೆಂಗಳೂರಿನ ಚಿತ್ರಣವನ್ನೇ ಬದಲು ಮಾಡೋಣ. ಇದಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಯಡಿಯೂರಪ್ಪ ಹೇಳಿದರು.
ಸಮಾರಂಭದಲ್ಲಿ ರಾಜ್ಯಪಾಲ ವಜುಬಾಯಿ ವಾಲಾ, ಕೇಂದ್ರದ ಮಾಜಿ ಸಚಿವ ಡಾ.ಜೈರಾಮ್ ರಮೇಶ್, ಎಫ್‌ಕೆಸಿಸಿಐ ಅಧ್ಯಕ್ಷ ಸಿ.ಆರ್.ಜನಾರ್ಧನ ಸೇರಿದಂತೆ ಪ್ರಮುಖರಿದ್ದರು. ಇದೇ ಸಂದರ್ಭದಲ್ಲಿ ಉದ್ಯಮಿಗಳಿಗೆ ಸರ್.ಎಂ.ವಿಶ್ವೇಶ್ವರಯ್ಯ ಪ್ರಶಸ್ತಿ ನೀಡಿ ಗೌರಸಲಾಯಿತು.
_0.jpg)







