ಒಕ್ಕಲಿಗರ ಸಂಘಕ್ಕೆ ಸರಕಾರ ನೀಡಿದ್ದ ಜಾಗದ ವಿಚಾರ: ಗುತ್ತಿಗೆ ನವೀಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ

ಬೆಂಗಳೂರು, ಸೆ.15: ಬೆಂಗಳೂರು ಉತ್ತರ ತಾಲೂಕಿನ ಯಶವಂತಪುರ ಹೋಬಳಿಯ ಶ್ರೀಗಂಧದ ಪ್ರದೇಶದಲ್ಲಿ ಒಕ್ಕಲಿಗರ ಸಂಘಕ್ಕೆ ನೀಡಲಾಗಿರುವ 10 ಎಕರೆ ಜಮೀನಿನ ಗುತ್ತಿಗೆ ನವೀಕರಣಕ್ಕೆ ಸಂಬಂಧಿಸಿದ ಗುತ್ತಿಗೆ ಕರಾರುಪತ್ರವನ್ನು ಕಾರ್ಯಗತಗೊಳಿಸಬಾರದು ಎಂದು ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ಗುತ್ತಿಗೆ ನವೀಕರಣ ಮಾಡಿ 2012ರಲ್ಲಿ ಹೊರಡಿಸಿರುವ ಆದೇಶ ರದ್ದುಪಡಿಸಬೇಕೆಂದು ಕೋರಿ ವಕೀಲ ಎಸ್.ಉಮಾಪತಿ ಸಲ್ಲಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಮುಹಮ್ಮರ್ ನವಾಝ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಅರ್ಜಿದಾರ ಎಸ್.ಉಮಾಪತಿ ಅವರು ವಾದಿಸಿ, ರಾಜ್ಯ ಸರಕಾರ ಒಕ್ಕಲಿಗರ ಸಂಘಕ್ಕೆ ಸಮಾಜ ಸೇವೆ ಕಾರ್ಯಕ್ಕಾಗಿ ಸರ್ವೇ ನಂಬರ್ 130ರಲ್ಲಿ 10 ಎಕರೆ ಜಾಗವನ್ನು ನೀಡಿತ್ತು. ಆದರೆ, ಒಕ್ಕಲಿಗರ ಸಂಘವು ಈ ಜಾಗವನ್ನು ತಮ್ಮ ಸ್ವಹಿತಾಸಕ್ತಿಗಾಗಿ ಬಳಸಿಕೊಂಡು, ಸರ್ವೇ ನಂಬರ್ 129ರಲ್ಲಿ 5 ಎಕರೆ ಸರಕಾರಿ ಜಾಗವನ್ನು ಕಬಳಿಸಿ ಶಾಲೆಯನ್ನು ನಿರ್ಮಾಣ ಮಾಡಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.
ವಕೀಲರ ವಾದ ಆಲಿಸಿದ ನ್ಯಾಯಪೀಠವು ಅರ್ಜಿಗೆ ಸಂಬಂಧಿಸಿದಂತೆ ಹೆಚ್ಚುವರಿ ಆಕ್ಷೇಪಣೆ ಸಲ್ಲಿಸಿ ಎಂದು ಸರಕಾರಕ್ಕೆ ಸೂಚಿಸಿ, ವಿಚಾಣೆಯನ್ನು ಅ.21ಕ್ಕೆ ಮುಂದೂಡಿತು.





